ಮುಂಡಗೋಡ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ

leopard
Published on

ಮುಂಡಗೋಡ: ಪಟ್ಟಣದ ಹೊರವಲಯದ ಕಲಘಟಗಿ ರಸ್ತೆಯಲ್ಲಿ ಸ್ಮಶಾನದ ಬಳಿ ಚಿರತೆಯೊಂದು ಕಾಣಿಸಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.

ತಾಲೂಕಿನ ಇಂದೂರ ಗ್ರಾಮದ ವ್ಯಕ್ತಿಯೊಬ್ಬರು ಬೈಕ್ ಮೇಲೆ ಮುಂಡಗೋಡನಿಂದ ಇಂದೂರಗೆ ತೆರಳುತ್ತಿರುವಾಗ ಪಟ್ಟಣದ ಹೊರವಲಯದಲ್ಲಿರುವ ಸ್ಮಶಾನದ ಬಳಿ ಚಿರತೆ ನಡೆದು ಹೋಗುವುದನ್ನು ದೂರದಿಂದಲೆ ಮೂಬೈಲ್‌ನಲ್ಲಿ ಚಿತ್ರಿಸಿಕೊಂಡು ನಂತರ ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ.

ಅಧಿಕಾರಿಗಳ ಭೇಟಿ: ವಿಷಯ ತಿಳಿದ ವಲಯ ಅರಣ್ಯಾಧಿಕಾರಿ ಸುರೇಶ ಕಳ್ಳೋಳ್ಳಿ ಭಾನುವಾರ ಬೆಳಗ್ಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿರತೆಯ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿ, ಅದು ಚಿರತೆಯ ಹೆಜ್ಜೆ ಎಂದು ದೃಢಪಡಿಸಿದ ನಂತರ ಚಿರತೆಯ ಪತ್ತೆ ಕಾರ್ಯ ನಡೆಸಿದ್ದಾರೆ.

ಜನರಿಗೆ ಜಾಗೃತಿ: ಮುಂಡಗೋಡ ಪಟ್ಟಣ ಹಾಗೂ ಇಂದಿರಾನಗರ, ಕೊಪ್ಪ, ಇಂದೂರ ಗ್ರಾಮಗಳ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಒಬ್ಬೊಬ್ಬರೆ ಗದ್ದೆಗಳಿಗೆ ತೆರಳಬಾರದು ಹಾಗೂ ರಾತ್ರಿ ವೇಳೆ ಗದ್ದೆಯಲ್ಲಿ ಒಬ್ಬರೆ ಮಲಗಬಾರದು. ಚಿರತೆ ಕಂಡ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಧ್ವನಿವರ್ಧಕದ ಮೂಲಕ ಭಾನುವಾರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಯಿತು.

ಚಿರತೆ ಬಂದಿರುವುದು ನಿಜ. ಅದನ್ನು ಹಿಡಿಯಲು ಬೋನ್‌ಗಳನ್ನು ಇಡಲಾಗಿದೆ. ಸಾರ್ವಜನಿಕರು ಈ ಭಾಗದಲ್ಲಿ ಗದ್ದೆಗಳಿಗೆ ಹೋಗದಂತೆ ಹಾಗೂ ಹೆಚ್ಚು ಜಾಗೃತರಾಗಿರುವಂತೆ ಸೂಚಿಸಲಾಗಿದೆ. ಸುರೇಶ ಕಳ್ಳೋಳ್ಳಿ, ಆರ್.ಎಫ್.ಒ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net