ಬೆಳವಾಡಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ

14ark-6
Published on

ಅರಕಲಗೂಡು: ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡು ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದೆ.


ಕೆಲ ದಿನಗಳಿಂದ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಡ್ಡಾಡುತ್ತಿರುವ ಚಿರತೆ ಶುಕ್ರವಾರ ಬೆಳವಾಡಿ ನಿಂಗೇಗೌಡರ ತೋಟದಲ್ಲಿ ಪ್ರತ್ಯಕ್ಷವಾಗಿದೆ. ಚಿರತೆಯನ್ನು ಕಂಡು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಶನಿವಾರ ಗ್ರಾಮಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಬೋನು ಇರಿಸಿದ್ದಾರೆ.


ಒಂದು ವರ್ಷದಿಂದ ಕಸಬಾ, ದೊಡ್ಡಮಗ್ಗೆ ಹೋಬಳಿ ಭಾಗದಲ್ಲಿ ಅಲೆದಾಡುತ್ತಿದ್ದ ಚಿರತೆ ಜನರಲ್ಲಿ ಭಯ ಮೂಡಿಸಿತ್ತು. ಜಮೀನುಗಳ ಬಳಿ ತೆರಳಲು ಜನರು ಜೀವಭಯದಿಂದ ಹಿಂದೇಟು ಹಾಕುತ್ತಿದ್ದರು. ಕೆಲ ತಿಂಗಳ ಹಿಂದೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸಿಕ್ಕಿಬಿದ್ದಿತ್ತು. ಇದೀಗ ಮತ್ತೊಂದು ಚಿರತೆ ಕಾಣಿಸಿಕೊಂಡಿರುವುದು ಜನರ ನಿದ್ದೆಗೆಡಿಸಿದೆ.

ಗ್ರಾಮದ ತೋಟದ ಬಳಿ ಚಿರತೆ ಸಂಚರಿಸಿದ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಹೀಗಾಗಿ ಚಿರತೆ ಸೆರೆಗೆ ಬೋನು ಇರಿಸಲಾಗಿದೆ ಎಂದು ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿ ಶಂಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net