ಕುಡುಪಲಿಯ ತೋಟದ ಮನೆಯಲ್ಲಿ ಚಿರತೆ ಪ್ರತ್ಯಕ್ಷ

Cheeta in rattihalli
Published on

ರಟ್ಟಿಹಳ್ಳಿ: ತಾಲೂಕಿನ ಕಡೂರು ಗ್ರಾಮದ ಬಳಿ ಕುಡುಪಲಿ ರಸ್ತೆಯಲ್ಲಿ ರೈತ ಶಂಕ್ರಗೌಡ ಶಿರಗಂಬಿ ಅವರ ಜಮೀನಿನ ದನಕರುಗಳ ತೋಟದ ಮನೆಯ ಬಳಿ ಗುರುವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿರುವುದು ಸಿ.ಸಿ. ಕ್ಯಾಮರದಲ್ಲಿ ಸೆರೆಯಾಗಿದೆ. ಘಟನೆಯಿಂದ ಈ ಭಾಗದ ರೈತರಲ್ಲಿ ಆತಂಕ ಮನೆ ಮಾಡಿದ್ದು, ಅರಣ್ಯ ಇಲಾಖೆ ಚಿರತೆ ಸೆರೆಗೆ ಬೋನಿನ ವ್ಯವಸ್ಥೆ ಮಾಡಿದೆ.

ತೋಟದ ಮನೆಯಲ್ಲಿ ರೈತ ಶಂಕ್ರಗೌಡ ಶಿರಗಂಬಿ ಮಲಗಿದ್ದರು. ರಾತ್ರಿ 12.30ರ ವೇಳೆ ಚಿರತೆಯೊಂದು ಮನೆಯ ಆವರಣದಲ್ಲಿ ನಾಯಿ ಬೇಟೆಗೆ ಆಗಮಿಸಿದೆ. ಚಿರತೆ ನಾಯಿ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಮೂರಾಲ್ಕು ನಾಯಿಗಳು ಬೊಗಳಲು ಪ್ರಾರಂಭಿಸಿದೆ. ರೈತ ಶಂಕ್ರಗೌಡ ಎದ್ದು ಸಿ.ಸಿ. ಕ್ಯಾಮರಾ ವೀಕ್ಷಣೆ ಮಾಡಿದಾಗ ಮನೆಯ ಬಳಿ ಚಿರತೆಯೊಂದು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಜಮೀನಿನಲ್ಲಿ ಚಿರತೆಯ ಹೆಜ್ಜೆ ಗುರುತು ಸ್ಪಷ್ಟವಾಗಿ ಕಾಣುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಚಿರತೆ ಬಂದಿರುವುದನ್ನು ಖಚಿತಪಡಿಸಿಕೊಂಡು ಸೆರೆಗೆ ಬೋನಿನ ವ್ಯವಸ್ಥೆ ಮಾಡಿದೆ.

ಈ ಕುರಿತು ಉಪವಲಯ ಅರಣ್ಯಾಧಿಕಾರಿ ಸಂತೋಷ ಆವಕ್ಕನವರ ಮಾತನಾಡಿ, ಚಿರತೆ ಚಲನವಲನ ಸಿ.ಸಿ. ಕ್ಯಾಮರದಲ್ಲಿ ಸೆರೆಯಾಗಿದ್ದು, ಸೆರೆಗೆ ಬೋನಿನ ವ್ಯವಸ್ಥೆ ಮಾಡಲಾಗಿದೆ ಮತ್ತು ರಾತ್ರಿ ವೇಳೆ ಸಿಬ್ಬಂದಿ ಗಸ್ತು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಜಾನುವಾರುಗಳಿಗೆ ಮೇವಿನ ಮತ್ತು ನೀರಿನ ಕೊರತೆಯಿಂದಾಗಿ ತೋಟದ ಮನೆಯ ಬಳಿ ದನದ ಕೊಟ್ಟಿಗೆಯ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ವೇಳೆ ಹೆಸ್ಕಾಂ ಕೃಷಿ ಪಂಪ್ ಸೆಟ್​ಗಳಿಗೆ ವಿದ್ಯುತ್ ಪೂರೈಕೆ ಮಾಡುವುದರಿಂದ ನೀರು ಹಾಯಿಸಿಕೊಳ್ಳಲು ಅನಿವಾರ್ಯವಾಗಿ ರೈತರು ಜಮೀನಿಗೆ ತೆರಳ ಬೇಕಾಗುತ್ತದೆ. ಚಿರತೆಯ ಪ್ರತ್ಯಕ್ಷದಿಂದಾಗಿ ರೈತರಿಗೆ ಆತಂಕ ಉಂಟಾಗಿದ್ದು, ಶೀಘ್ರವೇ ಅರಣ್ಯ ಇಲಾಖೆ ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕು. | ಶಂಕ್ರಗೌಡ ಶಿರಗಂಬಿ, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net