ಮ.ಬೆಟ್ಟದ ಮಾರ್ಗದಲ್ಲಿ ಚಿರತೆ ಪ್ರತ್ಯಕ್ಷ

21 HANUR 4
ಮಲೆಮಹದೇಶ್ವರ ಬೆಟ್ಟ ಮಾರ್ಗದ ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ.
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಮಾರ್ಗದ ಶನೈಚ್ಚರ ಸ್ವಾಮಿ ದೇಗುಲದ ಬಳಿ ಶನಿವಾರ ರಾತ್ರಿ ಚಿರತೆಯೊಂದು ಕಾಣಿಸಿಕೊಂಡು ಭಕ್ತರಲ್ಲಿ ಆತಂಕವನ್ನು ಉಂಟು ಮಾಡಿದೆ.

ಮ.ಬೆಟ್ಟದಿಂದ ತಾಳುಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗವು ಅರಣ್ಯ ಪ್ರದೇಶದ ಮೂಲಕ ಹಾದು ಹೋಗಿದ್ದು, ಮಲೆಮಹದೇಶ್ವರ ವನ್ಯಜೀವಿ ಧಾಮಕ್ಕೆ ಸೇರಿದೆ. ಈ ಮಾರ್ಗದಲ್ಲಿ ರಸ್ತೆಯಲ್ಲಿ ಕಾಡಾನೆಯೊಂದು ಆಗ್ಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿಗೆ ಕಡಿಮೆಯಾಗಿದ್ದು, ಈವರೆಗೂ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿರಲಿಲ್ಲ. ಆದರೀಗ ಶನಿವಾರ ರಾತ್ರಿ ಕಾರಿನಲ್ಲಿ ಮ.ಬೆಟ್ಟದಿಂದ ಕೊಳ್ಳೇಗಾಲದ ಕಡೆ ತೆರಳುತ್ತಿದ್ದವರಿಗೆ ಶನೈಚ್ಚರ ಸ್ವಾಮಿ ದೇಗುಲದ ಸಮೀಪ ಚಿರತೆ ಕಾಣಿಸಿಕೊಂಡಿದೆ. ಇದರಿಂದ ಭಕ್ತರಲ್ಲಿ ಅದರಲ್ಲೂ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಿ ಪ್ರಾಣಾಪಾಯ ಸಂಭವಿಸುವ ಮುನ್ನ ಚಿರತೆ ರಸ್ತೆಯಲ್ಲಿ ಕಾಣಿಸಿಕೊಳ್ಳದಂತೆ ಅಗತ್ಯ ಕ್ರಮ ವಹಿಸಬೇಕು ಎಂಬ ಒತ್ತಾಯ ಭಕ್ತರಿಂದ ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net