ಬಂಕನೇರಿಯಲ್ಲಿ ಚಿರತೆ ಪ್ರತ್ಯಕ್ಷ

Leopard sighted in Bankaneri
ಬಂಕನೇರಿ ಗ್ರಾಮದಲ್ಲಿ ಚಿರತೆ ಕಂಡು ಬಂದಿದೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಶ್ರೀಧರ ವಿಶ್ವಕರ್ಮ, ಮಹೆಶ ಮರೆನ್ನವರ, ಸರಳಾ ಸೊಪ್ಪಿನ ಮತ್ತಿತರರಿದ್ದಾರೆ.
Published on

ಕುಳಗೇರಿ ಕ್ರಾಸ್: ಸಮೀಪದ ಬಂಕನೇರಿ ಗ್ರಾಮದಲ್ಲಿ ರವಿವಾರ ರಾತ್ರಿ ಚಿರತೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಗ್ರಾಮದ ಯಲ್ಲಪ್ಪ ಯಮನಪ್ಪ ಹುಳ್ಳಿ ಅವರ ತೋಟದ ಮನೆಯ ಪಕ್ಕದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ನಾಯಿಗಳ ಮೇಲೆ ದಾಳಿ ಮಾಡಿದ್ದು, ಶಬ್ದಕ್ಕೆ ಮನೆಯವರು ಎಚ್ಚರಗೊಂಡು ಟಾರ್ಚ್ ಹಾಕಿ ನೋಡಿದಾಗ ಚಿರತೆ ಕಾಣಿಸಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಕುಳಗೇರಿ ಹೋಬಳಿಯಲ್ಲಿ ಸುಮಾರು ಒಂದು ವಾರದಿಂದ ಚಿರತೆ ಸಂಚರಿಸುತ್ತಿದ್ದು, ಈ ಹಿಂದೆ ನರಸಾಪೂರ ಗ್ರಾಮದಲ್ಲಿ ರೈತರಿಗೂ ಕಾಣಿಸಿತ್ತು. ಈ ಕುರಿತು ಸಾರ್ವಜನಿಕರು ಅರಣ್ಯ ಇಲಾಖೆಗೆ ಸಾಕಷ್ಟು ಬಾರಿ ತಿಳಿಸಿದ್ದರು. ಆದರೆ, ಅಧಿಕಾರಿಗಳು ಚಿರತೆ ಸೆರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿದ್ದಾರೆ.

ಚಿರತೆ ಪ್ರತ್ಯಕ್ಷವಾದ ವಿಷಯ ತಿಳಿಯುತ್ತಿದ್ದಂತೆ ರೈತರು ಜಮೀನಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇತ್ತ ಸುದ್ದಿ ತಿಳಿದು ಉಪ ತಹಸೀಲ್ದಾರ್ ಮೊಮೀನ್, ಕಂದಾಯ ನಿರೀಕ್ಷಕ ಶ್ರೀಧರ ವಿಶ್ವಕರ್ಮ, ಗ್ರಾಮ ಆಡಳಿತಾಧಿಕಾರಿ ಸರಳಾ ಸೊಪ್ಪಿನ ಭೇಟಿ ನೀಡಿದರು.

ಕಂದಾಯ ನಿರೀಕ್ಷಕ ಶ್ರೀಧರ ವಿಶ್ವಕರ್ಮ ಮಾತನಾಡಿ, ಮೇಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಚಿರತೆ ರಕ್ಷಣೆಯ ಕುರಿತು ಅರಣ್ಯ ಇಲಾಖೆ ಸೂಚಿಸಲಾಗಿದೆ ಎಂದರು.

ಬಾದಾಮಿ ಆರ್‌ಎ್ಒ ಮಹೇಶ ಮರೆನ್ನವರ ಮಾತನಾಡಿ, ಚಿರತೆ ಕಂಡು ಬಂದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ, ಅಲ್ಲಿ ಕಂಡು ಬಂದಿರುವುದು ಚಿರತೆ ಹೆಜ್ಜೆ ಗುರುತುಗಳಲ್ಲ. ಜನರು ಭಯಗೊಳ್ಳುವ ಅವಶ್ಯಕತೆ ಇಲ್ಲ. ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net