

ರಟ್ಟಿಹಳ್ಳಿ: ತಾಲೂಕಿನ ಕಣವಿಸಿದ್ಧಗೇರಿ ಗ್ರಾಮದ ಹೊರವಲಯದ ಕಣವಿಸಿದ್ಧೇಶ್ವರ ದೇವಸ್ಥಾನದ ಬಳಿಯ ಕಚ್ಚಾರಸ್ತೆ ಬದಿ ಮಂಗಳವಾರ ಸಂಜೆ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚು ಮಾಡಿದೆ.
ಈಗಾಗಲೇ ಈ ಭಾಗದಲ್ಲಿ ಚಿರತೆ ದಾಳಿಯಿಂದ ವ್ಯಕ್ತಿ ಬಲಿಯಾಗಿದ್ದು, ಮತ್ತೊಬ್ಬ ಗಾಯಗೊಂಡಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಅರಣ್ಯ ಇಲಾಖೆ ನಿರಂತರವಾಗಿ ಬೋನಿನ ವ್ಯವಸ್ಥೆ ಮಾಡಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದೆ.
ಮಂಗಳವಾರ ರಾತ್ರಿ 7.30ಕ್ಕೆ ಹೊಸಕಟ್ಟಿ ಗ್ರಾಮದಿಂದ ಕೋಲಮನ್ ಸೌತಿಕಾಯಿ ಕಂಪನಿಯವರು ಕಣವಿಸಿದ್ಧಗೇರಿ ಗ್ರಾಮಕ್ಕೆ ಆಗಮಿಸುವ ವೇಳೆ ಪವಿತ್ರವನದ ಬಳಿ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿದೆ. ವಾಹನ ನಿಧಾನಗತಿಯಲ್ಲಿ ಚಲಾಯಿಸುತ್ತ ನಮ್ಮ ಸಿಬ್ಬಂದಿ ಮೊಬೈಲ್ಫೋನ್ನಲ್ಲಿ ಚಿರತೆ ಹೋಗುವುದನ್ನು ಸೆರೆಹಿಡಿದಿದ್ದಾರೆ ಎಂದು ಕಂಪನಿಯ ಪ್ರಕಾಶ ಗಾಳೇರ ತಿಳಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಾಡಲಾಗಿರುವ ಅರಣ್ಯ ಇಲಾಖೆಯ ವಾಟ್ಸ್ ಆಪ್ನಲ್ಲಿ ಹರಿಬಿಡಲಾಗಿದೆ.
ತಾಲೂಕು ಆಡಳಿತ ನಿರ್ಲಕ್ಷ್ಯ: ಕಣವಿಸಿದ್ಧಗೇರಿ ಗ್ರಾಮದ ಬಳಿ ಚಿರತೆ ದಾಳಿಯಿಂದ ವ್ಯಕ್ತಿ ಬಲಿಯಾಗಿದ್ದಾನೆ. ಅರಣ್ಯ ಇಲಾಖೆ ನಿರಂತರವಾಗಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದೆ. ಅರಣ್ಯ ಇಲಾಖೆಗೆ ಹೆಚ್ಚಿನ ಸಹಕಾರ ನೀಡಬೇಕಿರುವುದು ತಾಲೂಕಾಡಳಿತದ ಕರ್ತವ್ಯವಾಗಿದೆ. ಚಿರತೆ ಪದೇಪದೆ ಈ ಭಾಗದಲ್ಲಿ ಪ್ರತ್ಯಕ್ಷವಾಗುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಕೂಡಲೇ ತಾಲೂಕಾಡಳಿತ, ತಹಸೀಲ್ದಾರರು ಚಿರತೆ ಸೆರೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂಬುದು ಗ್ರಾಮಸ್ಥರು ಆಗ್ರಹವಾಗಿದೆ.