ಗುಮ್ಮಟನಗರಿಗರನ್ನು ಬೆಚ್ಚಿ ಬೀಳಿಸಿದ ಚಿರತೆ, ಅರಣ್ಯಾಧಿಕಾರಿಗಳು ಫುಲ್ ಅಲರ್ಟ್

CHEETA IN SINDAGI BYPASS
ವಿಜಯಪುರದ ಸಿಂದಗಿ ಬೈಪಾಸ್ ಬಳಿಯ ಮುನೇಶ್ವರಬಾಗ್ ಪ್ರದೇಶದ ಸಿಸಿಟಿವಿಯಲ್ಲಿ ಸೆರೆ ಸಿಕ್ಕ ಚಿರತೆ ದೃಶ್ಯಾವಳಿ.
Published on

ವಿಜಯಪುರ: ಬಯಲು ಸೀಮೆಯಾದರೂ ಹೆಚ್ಚುತ್ತಿರುವ ಕಬ್ಬು ಮತ್ತು ತೋಟಗಾರಿಕೆ ಬೆಳೆಯಿಂದಾಗಿ ಆಗಾಗ ಕಾಣಿಸಿಕೊಳ್ಳುತ್ತಿರುವ ಕಾಡು ಪ್ರಾಣಿಗಳು ಜನರನ್ನು ಭಯಭೀತರನ್ನಾಗಿಸಿದ್ದು, ಇದೀಗ ಅಂಥದ್ದೇ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ.

ಇಲ್ಲಿನ ಸಿಂದಗಿ ಬೈಪಾಸ್ ಬಳಿಯ ಮುನೇಶ್ವರಬಾಗ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ. ಭಾನುವಾರ ರಾತ್ರಿ ವಾಹನ ಸವಾರರು ಚಿರತೆ ಕಂಡು ಬೆಚ್ಚಿ ಬಿದ್ದಿದ್ದಾರಲ್ಲದೇ ಮೊಬೈಲ್‌ನಲ್ಲಿ ದೃಶ್ಯಾವಳಿ ಸೆರೆ ಹಿಡಿದಿದ್ದಾರೆ. ಅಲ್ಲದೇ, ಸಿಸಿ ಟಿವಿ ಕ್ಯಾಮೆರಾಗಳಲ್ಲೂ ಚಿರತೆಯ ಓಡಾಟದ ದೃಶ್ಯಗಳು ಸೆರೆ ಸಿಕ್ಕಿವೆ.

ಸಿಂದಗಿ ನಾಕಾ, ಮುನೇಶ್ವರಬಾಗ್ ಸುತ್ತಲಿನ ಪ್ರದೇಶಗಳಲ್ಲಿ ಚಿರತೆ ಓಡಾಡಿದೆ. ಇದರಿಂದ ಭಯಭೀತರಾದ ಸ್ಥಳೀಯರು ಮನೆ ಬಿಟ್ಟು ಹೊರಬರಲು ಹಿಂಜರಿಯುತ್ತಿದ್ದಾರೆ. ಕೂಡಲೇ ಚಿರತೆ ಸೆರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.

ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ ಅವರು, ‘ಚಿರತೆ ಇರುವುದು ಖಚಿತಪಟ್ಟಿದೆ. ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ರಾತ್ರಿ ಪೆಟ್ರೋಲಿಂಗ್ ಮಾಡಲು ಸೂಚಿಸಲಾಗಿದೆ. ಯಾವುದಕ್ಕೂ ಜನ ಹೆದರಬಾರದು. ಚಿರತೆ ಒಂದೇ ಸ್ಥಳದಲ್ಲಿ ಬೀಡು ಬಿಡಲ್ಲ. ನಿರಂತರವಾಗಿ ಸಂಚರಿಸುತ್ತಿರುತ್ತದೆ. ಹೀಗಾಗಿ ಬೇರೆ ಬೇರೆ ಕಡೆಗಳಲ್ಲೂ ಜನರಿಗೆ ಜಾಗೃತಿ ವಹಿಸಲು ತಿಳಿಸಲಾಗಿದೆ. ರಾತ್ರಿ ಪೆಟ್ರೋಲಿಂಗ್ ಮಾಡುವ ಮೂಲಕ ಒಬ್ಬೊಬ್ಬರೇ ತಿರುಗದಂತೆ, ರಾತ್ರಿ ಅನಗತ್ಯವಾಗಿ ಸಂಚರಿಸದಂತೆ, ಮಕ್ಕಳನ್ನು ಹೊರಬಿಡದಂತೆ ಘೋಷಿಸಲಾಗುವುದು’ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net