ಲಕ್ಷ್ಮೇಶ್ವರ ಭಾಗದಲ್ಲಿ ಚಿರತೆ ಓಡಾಟ?

leopard
Published on

ಲಕ್ಷ್ಮೇಶ್ವರ: ಪಟ್ಟಣದ ಹೊರವಲಯದ ಗುಂಜಳ ರಸ್ತೆಯ ಜಮೀನುಗಳಲ್ಲಿ ಮಂಗಳವಾರ ಸಂಜೆ ಚಿರತೆಯೊಂದು ಸಂಚರಿಸಿದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿರುವ ವಿಷಯ ಎಲ್ಲೆಡೆ ಹರಡಿದ್ದು, ರೈತರು ಆತಂಕದಲ್ಲಿದ್ದಾರೆ.

ಪಟ್ಟಣದ ಹಳ್ಳದಕೇರಿ ಓಣಿಯ ರೈತ ಕುಮಾರ ಸಾಲಾವಳಿಮಠ ಎಂಬುವರು ಜಮೀನಿನಲ್ಲಿ ಕೆಲಸ ಮಾಡುವಾಗ ಚಿರತೆಯನ್ನು ಕಂಡಿದ್ದಾಗಿ ಹೇಳಿದ್ದಾರೆ. ಸುದ್ದಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಬೆಳಗ್ಗೆ ರೈತರೊಂದಿಗೆ ಸುತ್ತಮುತ್ತಲಿನ ಪ್ರದೇಶವನ್ನೆಲ್ಲ ಪರಿಶೀಲಿಸಿದ್ದಾರೆ. ಜಾಡು ಹಿಡಿದು ಹೊರಟಾಗ ಈ ಪ್ರದೇಶದಲ್ಲಿ ಎರಡ್ಮೂರು ದಿನಗಳ ಹಿಂದೆ ಕುರಿಯೊಂದನ್ನು ಪ್ರಾಣಿಗಳು ತಿಂದಿರುವುದು ಕಂಡು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ, ‘ರೈತರು ನೋಡಿರುವುದು ಚಿರತೆಯೋ? ತೋಳವೋ? ಕತ್ತೆಕಿರುಬವೂ ? ಎಂಬ ಸ್ಪಷ್ಟ ಮಾಹಿತಿಯಿಲ್ಲ. ಆದಾಗ್ಯೂ ಈ ಭಾಗದ ರೈತರು ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಯಾವುದೇ ಸಂದರ್ಭದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ರಾತ್ರಿ ವೇಳೆ ಹೊಲದಲ್ಲಿ ತಂಗುವ ರೈತರು ಹಾಗೂ ಕುರಿಗಾಹಿಗಳು ಬ್ಯಾಟರಿ ಬಳಕೆ, ಬೆಂಕಿ ಹಾಕುವುದು ಸೇರಿ ಅಗತ್ಯ ಮುಂಜಾಗ್ರತೆ ವಹಿಸಬೇಕು’ ಎಂದು ತಿಳಿಸಿದರು.

ಚಿರತೆ ವಿಷಯ ತಿಳಿದು ರೈತರು ಭಯಭೀತರಾಗಿದ್ದಾರೆ. ಸದ್ಯ ಮೆಣಸಿನಕಾಯಿ ಮತ್ತು ಹಿಂಗಾರಿನ ಬೆಳೆ ಸಂರಕ್ಷಣೆಗಾಗಿ ಜಾನುವಾರುಗಳೊಂದಿಗೆ ಹೊಲದಲ್ಲಿ ಬೀಡು ಬಿಟ್ಟಿರುತ್ತಾರೆ. ಚಿರತೆಯ ಸಂಚಾರದ ಬಗ್ಗೆ ಅರಣ್ಯ ಇಲಾಖೆ ಸ್ಪಷ್ಟ ಮಾಹಿತಿ ಕಲೆಹಾಕಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರಾದ ನಿಂಗಪ್ಪ ಬನ್ನಿ, ಮಂಜುನಾಥ ಕೊಟಗಿ, ಶಿವಣ್ಣ ಕಟಗಿ, ಸಂಗಯ್ಯ ಸಾಲಾವಳಿಮಠ, ಕಿಟ್ಟಣ್ಣ ಪಾಟೀಲ, ನಾಗಪ್ಪ ರಡ್ಡೇರ, ಸೋಮಣ್ಣ ಕಮತದ, ರಾಘು ಕರೆತ್ತಿನ, ಗಂಗಾಧರ ಅಂಕಲಿ, ರಾಜು ಮುಳಗುಂದ, ಫಕ್ಕೀರಪ್ಪ ಕೊಡ್ಲಿ, ಈರಪ್ಪ ಕಟ್ಟಿಮನಿ, ಚನ್ನವೀರಗೌಡ ಪಾಟೀಲ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net