

ಬದಿಯಡ್ಕ: ಜಿಲ್ಲೆಯ ಬೇಡಡ್ಕ ಪಂಚಾಯಿತಿಯ ಕೊಳತ್ತೂರಿನಲ್ಲಿ ಭಾನುವಾರ ರಾತ್ರಿ ಬೋನಿನೊಳಗೆ ಸಿಲುಕಿದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೇರಳ-ಕರ್ನಾಟಕ ವ್ಯಾಪ್ತಿಯ ಬಂಟಾಜೆ ರಕ್ಷಿತಾರಣ್ಯ, ಜಾಂಬ್ರಿ ಪರಿಸರದಲ್ಲಿ ಬಿಟ್ಟಿರುವುದಾಗಿ ವದಂತಿ ಹಬ್ಬಿದೆ.
ಬೇಡಡ್ಕ ಸಮೀಪದ ಕೊಳತ್ತೂರು ನಿಡುವೋಟ್ಸ್‌ನ ಎಂ.ಜನಾರ್ದನನ್ ಎಂಬುವರ ರಬ್ಬರ್ ತೋಟದಲ್ಲಿ ಎರಡು ದಿನದ ಹಿಂದೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ, ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಹೆಣ್ಣು ಚಿರತೆ ಸಿಲುಕಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಆರ್‌ಆರ್‌ಟಿ ತಂಡ ಸ್ಥಳೀಯರ ಸಹಾಯದಿಂದ ರಾತ್ರಿಯೇ ಚಿರತೆಯನ್ನು ಬೋನು ಸಹಿತ ವಾಹನಕ್ಕೆ ಏರಿಸಿ ಸೋಮವಾರ ಮುಂಜಾನೆ ಪಾಣಾಜೆ ಭಾಗಕ್ಕೆ ಹೋಗುವ ಸಿಸಿ ಟಿವಿ ದೃಶ್ಯಗಳು ಲಭಿಸಿವೆ. ಆದರೆ ಈ ರಸ್ತೆಯ ಮೂಲಕ ಮರಳದೆ ಜಾಂಬ್ರಿ ಭಾಗದಿಂದ ಕಾಡು ಮಾರ್ಗದ ಮೂಲಕ ಕಿನ್ನಿಂಗಾರು ಪ್ರವೇಶಿಸಿದೆ. ಬೆಳಗ್ಗೆ 6ರ ಬಳಿಕ ಕಿನ್ನಿಂಗಾರು ಮೂಲಕ ಹಾದು ಹೋಗುವುದನ್ನು ಸ್ಥಳೀಯರು ನೋಡಿದ್ದಾರೆ. ಟೆಂಪೋ ಹಾಗೂ ಆರ್‌ಆರ್‌ಟಿ ವಾಹನ ನಾಟೆಕ್ಕಲ್ ಮೂಲಕ ಮರಳುವ ಸಿಸಿ ಕ್ಯಾಮರಾ ದೃಶ್ಯವೂ ಲಭಿಸಿದೆ.
ಇದರಿಂದ ಇದುವರೆಗೆ ಚಿರತೆ ಭೀತಿ ಇರದಿದ್ದ ಎಣ್ಮಕಜೆ, ಬೆಳ್ಳೂರು ಜನರನ್ನು ಆತಂಕಕ್ಕೆ ಒಳಪಡಿಸಿದೆ. ಎಣ್ಮಕಜೆ ಗ್ರಾಪಂ ವ್ಯಾಪ್ತಿಯ ವಾಣೀನಗರ, ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಕಿನ್ನಿಂಗಾರು ಭಾಗದ ಜನರ ತಂಡ ಸೋಮವಾರ ಸಂಜೆ ಕಾಸರಗೋಡು ಅರಣ್ಯ ಇಲಾಖೆ ವಿಭಾಗೀಯ ಕಚೇರಿಗೆ ಧಾವಿಸಿದ್ದಾರೆ.
ಡಿಎಫ್‌ಒ ಕಚೇರಿಗೆ ಮುತ್ತಿಗೆ: ಜಾಂಬ್ರಿ ಪ್ರದೇಶದಲ್ಲಿ ಚಿರತೆ ಬಿಟ್ಟಿರುವುದನ್ನು ಪ್ರತಿಭಟಿಸಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಬಿಜೆಪಿ ಕೇರಳ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ, ಸುನೀಲ್ ಪಿ.ಆರ್. ಉಪಸ್ಥಿತಿಯಲ್ಲಿ ಸ್ಥಳೀಯರು ಡಿಎಫ್‌ಒ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಅರಣ್ಯ ಇಲಾಖೆಗೆ ಸೇರಿದ ಜಿಲ್ಲೆಯ ರಕ್ಷಿತಾರಣ್ಯಕ್ಕೆ ಸಾಗಿಸಿ ಅಲ್ಲಿ ಚಿರತೆಯನ್ನು ಬಿಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಖಚಿತಪಡಿಸಿದ್ದರೂ ಜಾಗ ಬಹಿರಂಗಪಡಿಸಿಲ್ಲ. ಮುಳ್ಳುಹಂದಿ, ಸಾಕುನಾಯಿಗಳನ್ನು ಕೊಂದ ಚಿರತೆಯನ್ನು ಜನ ವಸತಿ ಪ್ರದೇಶದ ಸಣ್ಣ ಕಾಡಿನಲ್ಲಿ ಬಿಟ್ಟಿರುವುದು ಕೇರಳ ಕರ್ನಾಟಕ ಗಡಿಭಾಗದ ಮೂರೂ ಪಂಚಾಯಿತಿಗಳ ಜನರ ನಿದ್ದೆಗೆಡಿಸಲಿದೆ. ಚಂದ್ರಶೇಖರ್ ರಾವ್ ಕಲ್ಲಗ, ಬೆಳ್ಳೂರು ಗ್ರಾಪಂ ಮಾಜಿ ಅಧ್ಯಕ್ಷ
ದನಗಳನ್ನು ಮೇಯಲು ಬಿಡುವ ಪ್ರದೇಶ
ಜಾಂಬ್ರಿ ಕಾಡಿನ ಪೆರಿಯಾಲ್ ಪ್ರದೇಶದಲ್ಲಿ ಈಗಲೂ ದನಗಳನ್ನು ಮೇಯಲು ಬಿಡಲಾಗುತ್ತಿದೆ. ಕೇರಳದ ಜನವಸತಿ ಪ್ರದೇಶಕ್ಕೆ ಲಗ್ಗೆಯಿಟ್ಟ ಚಿರತೆಯನ್ನು ಮೃಗಾಲಯ ಅಥವಾ ದಟ್ಟ ಅಡವಿಗೆ ಬಿಡುವುದನ್ನು ಬಿಟ್ಟು, ಅಂಗನವಾಡಿ ಶಾಲೆ ಸಹಿತ ಸಣ್ಣ ಮಕ್ಕಳು ನಡೆದಾಡುವ ಕರ್ನಾಟಕ ವ್ಯಾಪ್ತಿಯ ಸಣ್ಣ ಕಾಡಿನಲ್ಲಿ ಬಿಟ್ಟಿರುವುದು ಸರಿಯಲ್ಲ ಎಂದು ಪಾಣಾಜೆಯ ಮಾಜಿ ಮಂಡಲ ಪಂಚಾಯಿತಿ ಪ್ರಧಾನ ಮಹಾಬಲೇಶ್ವರ ಭಟ್ ಗಿಳಿಯಾಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಕಣ್ಗಾವಲು
ಇತರ ಪ್ರದೇಶದಲ್ಲಿರುವ ಚಿರತೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಈ ಬಗ್ಗೆ ಹೆಚ್ಚಿನ ಭದ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಡಿಎಫ್‌ಒ ಕೆ.ಅಶ್ರಫ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಚಟುವಟಿಕೆ ಬಲಪಡಿಸುವ ಉದ್ದೇಶದಿಂದ ಆಧುನಿಕ ಕ್ಯಾಮರಾ ಟ್ರಾೃಪ್, ಹೆಲ್ಮೆಟ್, ಗುರಾಣಿಗಳು ಲಭಿಸುವಂತೆ ಮಾಡಲಾಗಿದೆ. ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಎನ್‌ಟಿಸಿಎ ಮಾರ್ಗಸೂಚಿ ಪ್ರಕಾರ ತಜ್ಞರ ಸಮಿತಿ ರಚಿಸಲಾಗುತ್ತಿದೆ. ಮಕ್ಕಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಅರಣ್ಯ ಪ್ರದೇಶದ ಸಮೀಪದಲ್ಲಿರುವ ಶಾಲೆ, ನಡೆದು ಬರುವ ದಾರಿಯಲ್ಲಿ ಭದ್ರತೆ ಬಲಪಡಿಸಲಾಗಿದೆ. ಅರಣ್ಯ ಇಲಾಖೆ, ಪೊಲೀಸರು, ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಕ್ಷಿಪ್ರ ಕಾರ್ಯಾಚರಣೆ ಪಡೆಯ ಕಾರ್ಯ ಬಲಪಡಿಸಲಾಗಿದೆ.
ಗ್ರಾಪಂ ಅಧ್ಯಕ್ಷರಿಂದ ಸಚಿವರಿಗೆ ಪತ್ರ
ಚಿರತೆಯನ್ನು ಎಣ್ಮಕಜೆ, ಬೆಳ್ಳೂರು ಗ್ರಾಪಂ ಗಡಿ ಪ್ರದೇಶ ಬಂಟಾಜೆ ಅರಣ್ಯ ಪ್ರದೇಶದಲ್ಲಿ ಬಿಟ್ಟಿರುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕೇರಳ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾರೆ. ಬೇರೆ ಪಂಚಾಯಿತಿ ವ್ಯಾಪ್ತಿಯಿಂದ ಸೆರೆ ಹಿಡಿದು ತಂದ ಚಿರತೆಯನ್ನು ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿ ಬಿಟ್ಟಿರುವುದು ಇಲಾಖೆ ಮಾನವೀಯತೆ ರಹಿತ ಕ್ರಮವಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಸ್ಪಷ್ಟ ಉತ್ತರ ನೀಡುತ್ತಿಲ್ಲವಾದ್ದರಿಂದ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿರುವುದಾಗಿ ತಿಳಿಸಿದ್ದಾರೆ.