ಸಿಲಿಕಾನ್ ಸಿಟಿಯಲ್ಲಿ ಚಿರತೆ ಪ್ರತ್ಯಕ್ಷ?

Leapord
Published on

ಬೆಂಗಳೂರು: ಯಶವಂತಪುರ ಹೋಬಳಿ ಪೀಣ್ಯ ಸಮೀಪದ ಕರಿಓಬನಹಳ್ಳಿ ಮಾ.4 ರಂದು ಮಲ್ಲೇಶ್ ಎಂಬುವವರ ಮನೆ ಮುಂಭಾಗ ಪ್ರಾಣಿ ಯೊಂದರ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಅದು ಚಿರತೆಯ ಹೆಜ್ಜೆ ಗುರುತುಗಳೇ ಎಂದು ಭಯಬೀತರಾದ ಸ್ಥಳೀಯರು ಮಾಧ್ಯಮಗಳಿಗೆ ಕೆರೆ ಮಾಡಿದ್ದಾರೆ.

ಮಾಧ್ಯಮಗಳಲ್ಲಿ ಪ್ರಸಾರವಾದ ಹಿನ್ನಲೆ ಎಚ್ಚೆತ್ತುಕೊಂಡ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳು ಸ್ಪಷ್ಟವಾಗಿ ಗೋಚರಿ ಸುತ್ತಿಲ್ಲದ ಕಾರಣ ಅದು ಚಿರತೆಯೇ ಎಂದು ಖಚಿತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ ಪೂರ್ತಿ ಕಾರ್ಯಾಚರಣೆ: ಮಲ್ಲೇಶ್ ಎಂಬುವವರ ಮನೆ ಮುಂಭಾಗದ ಹೆಜ್ಜೆ ಗುರುತುಗಳು ಚಿರತೆಯದ್ದೇ ಎಂದು ಸ್ಥಳೀಯರು ಊಹಿಸಿದ್ದಾರೆ. ಮಲ್ಲೇಶ್ ನಿವಾಸದ ಸಮೀಪ ಇದ್ದ ನಾಯಿ ಮಾ.5 ರಂದು ಸತ್ತು ಬಿದ್ದಿದ್ದು, ಚಿರತೆಯೇ ಅದನ್ನು ಕೊಂದು ಹಾಕಿದೆ ಎನ್ನಲಾಗುತ್ತಿದೆ. ಯಾವುದೇ ಸ್ಪಷ್ಟನೆ ಇಲ್ಲದ ಕಾರಣ ಅರಣ್ಯ ಸಿಬ್ಬಂದಿ ರಾತ್ರಿ ಪೂರ್ತಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಸ್ಥಳೀಯರು ಭಯ ಬೀಳುವ ಅಗತ್ಯವಿಲ್ಲ . ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ಯಾಮರಾ ಟ್ರಾಪ್ ಅಳವಡಿಸಿ, ಅದು ಯಾವ ಪ್ರಾಣಿ ಎಂದು ಪತ್ತೆ ಹಚ್ಚಲಾಗುವುದು ಎಂದು ಬೆಂಗಳೂರು ವಲಯ ಅರಣ್ಯಾಧಿಕಾರಿ ನರಸಿಂಹ ಮೂರ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net