ಕೆರಗೋಡು ಹೋಬಳಿಯಲ್ಲಿ ಚಿರತೆ ಹಾವಳಿ: ದ್ಯಾಪಸಂದ್ರ, ಉಪ್ಪಾರಕನಹಳ್ಳಿ ಭಾಗದಲ್ಲಿ ಆತಂಕ

Leopard problem in Keragodu hobli mandya
Published on

ಮಂಡ್ಯ: ತಾಲೂಕಿನ ಕೆರಗೋಡು ಹೋಬಳಿಯ ವಿವಿಧ ಭಾಗದಲ್ಲಿ ಕೆಲ ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಮಂಗಳವಾರ ಉಪ್ಪಾರಕನಹಳ್ಳಿ ಗ್ರಾಮದಲ್ಲಿ ಕೃಷ್ಣೇಗೌಡ ಎಂಬುವರಿಗೆ ಸೇರಿದ ಕರುವನ್ನು ಕೊಂದು ಹಾಕಿದೆ. ಇನ್ನು ದ್ಯಾಪಸಂದ್ರ, ಭವಾನಿಕೊಪ್ಪಲು, ನಂಜೇಗೌಡನಕೊಪ್ಪಲು ಭಾಗದಲ್ಲಿ ಜಮೀನು ಹಾಗೂ ಗ್ರಾಮದ ಸಮೀಪವೇ ಜನರಿಗೆ ಕಾಣಿಸಿಕೊಂಡಿದೆ. ಇದರಿಂದಾಗಿ ಹಗಲು ಹೊತ್ತಿನಲ್ಲಿಯೇ ಜಮೀನಿಗೆ ಹೋಗಲು ಹೆದರುವಂತಾಗಿದೆ.

ಬಿಳಿದೇಗಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಗ್ರಾಮಗಳಿರುವುದರಿಂದ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಿದೆ. ಜತೆಗೆ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವುದರಿಂದ ಜನರು ಭಯಬೀತಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮಾಹಿತಿ ಮೇರೆಗೆ ಬುಧವಾರ ಡಿಆರ್‌ಎಫ್‌ಒ ಸುರೇಶ್ ದ್ಯಾಪಸಂದ್ರ ಸೇರಿದಂತೆ ಅಕ್ಕಪಕ್ಕದ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಚಿರತೆ ಹೆಜ್ಜೆಯ ಗುರುತುಗಳನ್ನು ಸ್ಥಳೀಯರು ತೋರಿಸಿದ್ದಾರೆ. ಆದ್ದರಿಂದ ಚಿರತೆ ಸೆರೆಗೆ ಬೋನು ಇಡಲು ನಿರ್ಧರಿಸಲಾಗಿದೆ. ಅದರಂತೆ ಗುರುವಾರ ಕ್ರಮ ವಹಿಸಲಾಗುತ್ತಿದೆ ಎಂದು ಸುರೇಶ್ ವಿಜಯವಾಣಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net