

ಮಂಗಳೂರು: ಅರಣ್ಯ ಪ್ರದೇಶಗಳಲ್ಲಿ ಮಾನವನ ಅತಿಯಾದ ಹಸ್ತಕ್ಷೇಪದಿಂದ ದೇಶದಲ್ಲಿ ಚಿರತೆಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ಕಳೆದ ಒಂದು ಶತಮಾನದಲ್ಲಿ ಚಿರತೆಗಳ ಪ್ರಮಾಣ ಶೇ.75ರಿಂದ 90 ಇಳಿಮುಖವಾಗಿದೆ ಎಂದು ವನ್ಯಜೀವಿ ಸಂಶೋಧನೆ ಬಹಿರಂಗ ಪಡಿಸಿದೆ. ಅಧ್ಯಯನ ಪ್ರಕಾರ, ಚಿರತೆಗಳ ಪ್ರಮಾಣ ಅರೆಶುಷ್ಕ ಪ್ರದೇಶವಾದ ದಖ್ಖನ್ ಬಯಲು ಹಾಗೂ ಉತ್ತರದ ಶಿವಾಲಿಕ್ನಲ್ಲಿ ಶೇ.90 ಹಾಗೂ ಟೆರಾಯ್ (ನೇಪಾಳ-ಭಾರತ ಮಧ್ಯದ ವಲಯ) ಪ್ರದೇಶದಲ್ಲಿ ಶೇ.88 ಇಳಿಕೆಯಾಗಿದೆ. ಇದಕ್ಕೆ ಹೋಲಿಸಿದರೆ ಪಶ್ಚಿಮಘಟ್ಟದಲ್ಲಿ ಪರಿಸ್ಥಿತಿ ಕೊಂಚ ಸಮಾಧಾನಪಡುವಂತಿದ್ದು, ಈ ಭಾಗದಲ್ಲಿ ಶೇ.75 ಪ್ರಮಾಣ ಇಳಿಕೆ ಕಂಡುಬಂದಿದೆ.
ಅಧ್ಯಯನ ಹೇಗೆ: ದೇಶದ ವಿವಿಧೆಡೆಯ ಚಿರತೆಗಳ ಮಾದರಿಗಳಿಂದ ಅನುವಂಶಿಕ ಅಧ್ಯಯನ ನಡೆಸಲಾಗಿದ್ದು, ಬೆಂಗಳೂರಿನ ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ ಸಂಸ್ಥೆ (ಸಿಡಬ್ಲ್ಯುಎಸ್) ಯಾವ ರೀತಿ ಅವುಗಳ ಸಂಖ್ಯೆ ಇಳಿಮುಖವಾಯಿತು ಎನ್ನುವುದರ ವಿಶ್ಲೇಷಣೆಯನ್ನು ಮುಂದಿಟ್ಟಿದೆ. ಪ್ರತಿ ವಲಯದಲ್ಲೂ ಚಿರತೆಗಳ ಜೀವ ಸಮೂಹದ ಅನುವಂಶಿಕ ಇಳಿಕಾ ವಿಶ್ಲೇಷಣೆ ಹಾಗೂ ಪ್ರಸ್ತುತ ಚಿರತೆಗಳ ಸಂಖ್ಯೆ ಇರುವಿಕೆಯ ಆಕ್ಯುಪೆನ್ಸಿ ಮಾಡೆಲ್ ಕೈಗೊಳ್ಳಲಾಗಿದೆ. ಭಾರತ ಉಪಖಂಡದ ವಿವಿಧೆಡೆಗಳಿಂದ ಚಿರತೆಯ ಅನುವಂಶಿಕ ಮತ್ತು ಇರುವಿಕೆ ಮಾಹಿತಿಯನ್ನು ಬಳಸಿಕೊಂಡು ಇಳಿಕೆ ಪ್ರಮಾಣದ ಅಧ್ಯಯನ ನಡೆಸಿರುವ ವಿಜ್ಞಾನಿಗಳಿಗೆ ಈ ವಿಚಾರ ತಿಳಿದುಬಂದಿದೆ. ಅಧ್ಯಯನ ತಂಡದಲ್ಲಿ ವಿಜ್ಞಾನಿಗಳಾದ ಸುಪ್ರಿಯಾ ಭಟ್, ಡಾ. ಕೃತಿ ಕಾರಂತ್, ಡಾ. ಬಿವಷ್ ಪಾಂಡವ್ ಮತ್ತು ಡಾ. ಸಾಮ್ರಾಟ ಮೊಂಡಲ್ ಇದ್ದರು.
ಚಿರತೆ ಮಲದ ಮಾದರಿ ಕಲೆ ಹಾಕಿ, 13 ಮೈಕ್ರೋಸ್ಯಾಟಲೈಟ್ ಮಾರ್ಕರ್(ಡಿಎನ್ಎ-ಮೂಲಧಾತುವಿನಲ್ಲಿರುವ ವಿಶಿಷ್ಟ ಅಂಶ) ಬಳಸಿ 56 ಪ್ರತ್ಯೇಕ ಚಿರತೆಗಳನ್ನು ಗುರುತಿಸಲಾಗಿದೆ. ಮೊದಲೇ ಇದ್ದ 143 ಪ್ರತ್ಯೇಕ ಚಿರತೆಗಳ ಮಾಹಿತಿಯೊಂದಿಗೆ ಸಾಫ್ಟ್ವೇರ್ ಬಳಸಿ ತಾಳೆ ಹಾಕಿ ನೋಡಲಾಗಿದೆ. ಲಭ್ಯ ಮಾಹಿತಿ ಪ್ರಕಾರ ಮಾನವನ ಅಭಿವೃದ್ಧಿ ಪರಿಣಾಮ ಚಿರತೆಗಳ ಸಂಖ್ಯೆ ಶೇ.75ರಿಂದ 90ರವರೆಗೆ ಇಳಿಮುಖವಾಗಿರುವ ಸಾಧ್ಯತೆ ಕಂಡುಬಂದಿದೆ. ಅಧ್ಯಯನದಲ್ಲಿ ಕಂಡುಬಂದ ಮತ್ತೊಂದು ಮಹತ್ವದ ಅಂಶ ಎಂದರೆ ನಿರ್ಬಂಧಿತ ವಂಶವಾಹಿ ವರ್ಗಾವಣೆ. ಚಿರತೆಗಳು ವಿಶಾಲವಾಗಿ ಹರಡಿಕೊಂಡಿರುವ ಭೂಭಾಗದಲ್ಲಿ ಸಂಚರಿಸಲು ಆಗದೆ ಕೆಲ ಸೀಮಿತ ಭಾಗದಲ್ಲಷ್ಟೇ ಸಂತಾನೋತ್ಪತ್ತಿ ನಡೆಸಿರುವ ಸಾಧ್ಯತೆ ಇದೆ. ಇದರಿಂದಾಗಿ ಪಶ್ಚಿಮಘಟ್ಟ ಸೇರಿ ನಾಲ್ಕು ಭೂಭಾಗದಲ್ಲಿ ಚಿರತೆಗಳ ಸಂಖ್ಯೆ ಕೇಂದ್ರೀಕೃತವಾಗಿರುವುದು ಕಂಡುಬಂದಿದೆ.
ಭಾರತದಲ್ಲಿ ಹುಲಿ ಸಂರಕ್ಷಣೆಗೆ ಸಾಕಷ್ಟು ಮಹತ್ವ ನೀಡಲಾಗಿದೆ. ಅದಕ್ಕೆ ಹೋಲಿಸಿದರೆ ಚಿರತೆಗಳು ನಿರ್ಲಕ್ಷ್ಯ್ಕೆ ಒಳಗಾಗಿವೆ. ಅಧ್ಯಯನ ಪ್ರಕಾರ ಚಿರತೆಗಳ ಸಂಖ್ಯೆ ಇಳಿಮುಖವಾಗುತ್ತಿದೆ. | ಡಾ.ಕೃತಿ ಕಾರಂತ ವನ್ಯಜೀವಿ ಸಂಶೋಧಕಿ
| ವೇಣುವಿನೋದ್ ಕೆ.ಎಸ್.