

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನೆಲಮಂಗಲ ತಾಲೂಕು ಕಂಬಾಳುಗೊಲ್ಲರಹಟ್ಟಿ ಗ್ರಾಮದಲ್ಲಿ ಮಹಿಳೆಯನ್ನು ಕೊಂದ ಚಿರತೆ ಯಾವುದು ಎಂಬುದು ಕಗ್ಗಾಂಟಾಗಿರುವ ನಡುವೆಯೇ ಶಿವಗಂಗೆ ಬೆಟ್ಟದ ಹಿಂಬದಿಯ ಹುಣಸೇಹಳ್ಳ ಸಮೀಪದ ಬೋನಿಗೆ ಬಿದ್ದ ಮೂರನೇ ಗಂಡುಚಿರತೆಯೇ ನರಭಕ್ಷಕ ಚಿರತೆಯಾಗಿರಬಹುದು ಎಂದು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
ಕ್ಯಾಮರಾ ಟ್ರ್ಯಾಪ್‌ನಲ್ಲಿ ಗಂಡುಚಿರತೆ: ಚಿರತೆಗಳ ಚಲನವಲನ ಪತ್ತೆಗಾಗಿ ಅರಣ್ಯ ಇಲಾಖೆ ಕರಿಯಮ್ಮ ಮೃತಪಟ್ಟ ಸುತ್ತಮುತ್ತಲ ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿತ್ತು. ಇದರಲ್ಲಿ ಇದುವರೆಗೆ ಮೂರು ಚಿರತೆಗಳ ಚಲನವಲನ ಪತ್ತೆಯಾಗಿತ್ತು. ಆ ಮೂರು ಚಿರತೆಗಳು ಬೋನಿಗೆ ಬಿದ್ದಿವೆ. ಮತ್ತೆ ಈ ಭಾಗದಲ್ಲಿ ಚಿರತೆಗಳ ಸಂಚಾರ ಕಂಡುಬಂದಿಲ್ಲ ಎನ್ನಲಾಗಿದೆ. ಆದರೆ ಕರಿಯಮ್ಮ ಪ್ರಕರಣದ ಆಸುಪಾಸಿನಲ್ಲೇ ಹುಣಸೇಹಳ್ಳದ ಬಳಿ ಬೋನಿಗೆ ಬಿದ್ದ ಗಂಡುಚಿರತೆ ಸಾಕಷ್ಟು ಬಾರಿ ಕಾಣಿಸಿಕೊಂಡಿದೆ. ಉಳಿದ ಚಿರತೆಗಳು ಇತ್ತ ಕಡೆ ಬಂದಿಲ್ಲ ಎಂಬುದು ದೃಢವಾಗಿದೆ. ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳ ಪರಿಶೀಲನೆಯಲ್ಲಿ ಸಾಕಷ್ಟು ಬಾರಿ ಅದೇ ಚಿರತೆ ಗಿರಕಿ ಹೊಡೆದಿರುವುದು ಸ್ಪಷ್ಟವಾಗಿದೆ. ಸಾಮಾನ್ಯವಾಗಿ ಬೇಟೆಯಾಡಿದ ಸ್ಥಳಗಳ ಸುತ್ತಮುತ್ತ ಮತ್ತೆ ಬೇಟೆಗಾಗಿ ಕಾಡುಮೃಗಗಳು ಹೊಂಚುಹಾಕುತ್ತವೆ ಎನ್ನಲಾಗಿದ್ದು ಮೂರನೇ ಬಾರಿ ಬೋನಿಗೆ ಬಿದ್ದ ಗಂಡುಚಿರತೆಯೇ ಕರಿಯಮ್ಮ ಅವರನ್ನು ಕೊಂದಿರಬಹುದು ಎಂಬ ಶಂಕೆ ದಟ್ಟವಾಗಿದೆ.
ನ.18ರಂದು ಕಂಬಾಳುಗೊಲ್ಲರಹಟ್ಟಿ ಗ್ರಾಮದ ಜಮೀನಿನಲ್ಲಿ ಹುಲ್ಲು ಕುಯ್ಯುವ ವೇಳೆ ಚಿರತೆಯೊಂದು ದಾಳಿ ನಡೆಸಿ ಕರಿಯಮ್ಮ ಎಂಬುವವರನ್ನು ಕೊಂದು ಹಾಕಿತ್ತು. ಅಂದಿನಿಂದಲೇ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನುಗಳನ್ನಿಟ್ಟು ಕಾರ್ಯಾಚರಣೆ ಆರಂಭಿಸಿತ್ತು. ಕಂಬಾಳುಗೊಲ್ಲರಹಟ್ಟಿಯ ಅರಣ್ಯದಂಚಿನಲ್ಲಿ ಇಟ್ಟಿದ್ದ ಬೋನಿಗೆ ಮೊದಲಿಗೆ ಗಂಡು ಚಿರತೆ ಸೆರೆಯಾಗಿತ್ತು. ನಂತರದಲ್ಲಿ ಮುದ್ದೀರೇಶ್ವರ ದೇವಸ್ಥಾನದ ಬಳಿ ಹೆಣ್ಣು ಚಿರತೆ ಸೆರೆ ಸಿಕ್ಕಿತ್ತು. ನಂತದಲ್ಲಿ ಶಿವಗಂಗೆ ಬೆಟ್ಟದ ಹಿಂಬದಿಯ ಹುಣಸೇಹಳ್ಳ ಸಮೀಪದ ಹತ್ತಿರ ಇಟ್ಟಿದ್ದ ಬೋನಿನಲ್ಲಿ ಗಂಡು ಚಿರತೆ ಸೆರೆ ಸಿಕ್ಕಿತ್ತು. ಈ ಮೂರು ಚಿರತೆಗಳ ಕೂದಲು, ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಆದರೆ ಇದುವರೆಗೆ ವರದಿ ಬರುವುದು ತಡವಾಗಿದೆ. ಈ ಹಿನ್ನೆಲೆಯಲ್ಲಿ ಕರಿಯಮ್ಮ ಅವರನ್ನು ಕೊಂದ ಚಿರತೆ ಯಾವುದೆಂಬುದು ಖಚಿತವಾಗಿಲ್ಲ.
ವರದಿ ತಡವಾಗುತ್ತಿದೆ: ಕರಿಯಮ್ಮ ಅವರ ಮರಣೋತ್ತರ ಪರೀಕ್ಷೆಯೂ ಅರಣ್ಯ ಇಲಾಖೆ ಕೈಸೇರಿಲ್ಲ, ಅತ್ತ ಕಡೆ ಚಿರತೆಗಳ ರಕ್ತ ಮಾದರಿ ಪರೀಕ್ಷೆ ವರದಿ ನೀಡುವವರು ರಜೆ ಮೇಲೆ ಇರುವುದರಿಂದ ವರದಿ ತಡವಾಗುತ್ತಿದೆ ಎನ್ನಲಾಗಿದ್ದು, ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕೊಡುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಕರಿಯಮ್ಮ ಅವರನ್ನು ಕೊಂದ ಚಿರತೆ ಯಾವುದೆಂಬುದು ಖಚಿತವಾಗದ ಹೊರತು ಕಾರ್ಯಾಚರಣೆಯನ್ನೂ ಸ್ಥಗಿತಗೊಳಿಸುವಂತಿಲ್ಲ ಎಂಬ ಸ್ಥಿತಿ ಇದೆ. ಇದರ ನಡುವೆ ಚಿರತೆ ಸೆರೆಗೆ ಬೀಡುಬಿಟ್ಟಿರುವ ಅರಣ್ಯ ಸಿಬ್ಬಂದಿ ಹೈರಾಣಾಗಿದ್ದಾರೆ.
----------
ಕಾಡುಮೃಗಗಳ ಚಲನವಲನ ಟ್ರ್ಯಾಪ್ ಮಾಡಲು ಅರಣ್ಯ ವ್ಯಾಪ್ತಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಚಿರತೆಗಳ ಚಲನವಲನಗಳ ಪೈಕಿ ಮೂರನೇಯದಾಗಿ ಸೆರೆಯಾದ ಗಂಡು ಚಿರತೆ ಸಾಕಷ್ಟು ಬಾರಿ ಕರಿಯಮ್ಮ ಪ್ರಕರಣ ಸುತ್ತಮುತ್ತಲ ಪ್ರದೇಶದಲ್ಲೇ ಕಾಣಿಸಿಕೊಂಡಿದೆ. ಮತ್ಯಾವ ಚಿರತೆಯೂ ಇತ್ತ ಕಡೆ ಸುಳಿದಿಲ್ಲ. ಇದರ ಆಧಾರದ ಮೇಲೆ ಅದೇ ಚಿರತೆಯೇ ಕರಿಯಮ್ಮ ಸಾವಿಗೆ ಕಾರಣವಾಗಿದೆ ಎಂಬ ಶಂಕೆ ಇದೆ. ಆದರೆ ವರದಿ ಬರುವವರೆಗೆ ಖಚಿತವಾಗುವುದಿಲ್ಲ.
ಸರಿನಾ ಸಿಕ್ಕಲಿಗಾರ್, ಉಪ ಅರಣ್ಯ ಸಂರಕ್ಷಾಧಿಕಾರಿ ಬೆಂ.ಗ್ರಾಮಾಂತರ