

ಕಾಸರಗೋಡು: ಮಲೆನಾಡು ಪ್ರದೇಶದಲ್ಲಿ ಚಿರತೆ ಭೀತಿ ಮುಂದುವರಿದಿದ್ದು, ಮಡಿಕೈ ಪ್ರದೇಶದಲ್ಲಿ ಆಟೋರಿಕ್ಷಾದಲ್ಲಿ ಸಂಚರಿಸುತ್ತಿದ್ದವರು ಚಿರತೆಯನ್ನು ಕಂಡು ಮಾಹಿತಿ ನೀಡಿದ್ದಾರೆ.
ಶುಕ್ರವಾರ ರಾತ್ರಿ 9.30ರ ವೇಳೆಗೆ ಆಟೋಚಾಲಕ ಕುಞಿರಾಮನ್ ಎಂಬುವರು ರಸ್ತೆಗೆ ಅಡ್ಡ ಸಂಚರಿಸಿರುವುದನ್ನು ಕಂಡಿದ್ದರು. ಇದೇ ಪ್ರದೇಶದಲ್ಲಿ ಶನಿವಾರ ನಸುಕಿಗೆ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಟಿ.ಚಂದ್ರನ್ ಚಿರತೆ ಸಂಚರಿಸುತ್ತಿರುವುದನ್ನು ಕಂಡಿದ್ದು, ಜೋರಾಗಿ ಶಬ್ದ ಮಾಡಿದಾಗ ಚಿರತೆ ಮುಂದಕ್ಕೆ ಸಂಚರಿಸಿರುವುದಾಗಿ ಇವರು ತಿಳಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ನೆಲ್ಲಿಯಡ್ಕ ನಿವಾಸಿ ಬಿಜು ಎಂಬುವರ ಮನೆ ಸನಿಹದ ಸಾಕುನಾಯಿಯ ಗೂಡಿನ ಸನಿಹ ಚಿರತೆ ಸಂಚಾರ ಕಂಡುಬಂದಿತ್ತು. ಚಿರತೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯ ಜನತೆ ಅಳಲು ವ್ಯಕ್ತಪಡಿಸಿದ್ದಾರೆ. ಚಿರತೆ ಹೆಚ್ಚಿನ ಸಂಖ್ಯೆಯಲ್ಲಿ ನಾಡಿಗಿಳಿಯುತ್ತಿದ್ದಂತೆ ಕೋತಿಗಳು ಹಾಗೂ ಕಾಡುಹಂದಿಗಳ ಸಂಖ್ಯೆಯಲ್ಲಿ ಕುಸಿತವುಂಟಾಗಿರುವುದಾಗಿ ಬೋವಿಕ್ಕಾನದ ಜನತೆ ತಿಳಿಸುತ್ತಾರೆ.