ಸಂಶಿ ಹೋಬಳಿ ಸುತ್ತ ಚಿರತೆ ಆತಂಕ

5 KND 2-forest
Published on

ಕುಂದಗೋಳ: ತಾಲೂಕಿನ ಸಂಶಿ ಹೋಬಳಿಯ ಚಾಕಲಬ್ಬಿ, ಹೊಸಳ್ಳಿ, ಭರದ್ವಾಡ, ಯರೇಬೂದಿಹಾಳ, ಪಶುಪತಿಹಾಳ, ಗುಂಜಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನುಂಟು ಮಾಡಿದೆ.

ಚಿರತೆ ಈ ಗ್ರಾಮಗಳ ಜಮೀನುಗಳ ಸುತ್ತ ಮುತ್ತ ಓಡಾಡುತ್ತಿರುವುದು ಕಂಡು ಬಂದಿದ್ದರಿಂದ, ರೈತರು, ವಿದ್ಯಾರ್ಥಿಗಳು ಜೀವಭಯದಲ್ಲಿ ಸಂಚರಿಸುವಂತಾಗಿದೆ. ರಾತ್ರಿ ಚಿರತೆ ರಸ್ತೆಯಲ್ಲೇ ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಚಿತ್ರೀಕರಿಸಿದ್ದಾರೆ. ಹೀಗಾಗಿ ದ್ವಿಚಕ್ರ ವಾಹನ ಸವಾರರು ಓಡಾಡದಂತಾಗಿದೆ.

ಚಿರತೆ ಕುರಿ ಹಾಗೂ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುವ ಸಂಶಯ ಜನರಲ್ಲಿ ಕಾಡತೊಡಗಿತ್ತು. ಈ ಭಾಗದಲ್ಲಿ ಈ ಚಿರತೆ ಹಾವಳಿ ಹೆಚ್ಚಾಗಿದ್ದು, ರೈತರು ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದರು. ಕೂಡಲೇ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರಿಂದ ಹುಬ್ಬಳ್ಳಿ ಅರಣ್ಯ ಇಲಾಖೆ ವಲಯ ಅಧಿಕಾರಿಗಳು ಭೇಟಿ ನೀಡಿ, ಗ್ರಾಮದ ಜಮೀನಿನ ಹೊರ ವಲಯಗಳಲ್ಲಿ ಚಿರತೆಯನ್ನು ಹುಡುಕಾಡಿದರು. ಆದರೆ, ಯಾವುದೇ ರೀತಿಯ ಚಿರತೆಯ ಕುರುಹುಗಳು ಕಂಡುಬಂದಿಲ್ಲ ಎಂದು ವಲಯ ಅರಣ್ಯ ಅಧಿಕಾರಿ ಆರ್.ಎಸ್. ಉಪ್ಪಾರ ತಿಳಿಸಿದರು.  ಉಪ ವಲಯ ಅರಣ್ಯ ಅಧಿಕಾರಿಗಳಾದ ಪ್ರಕಾಶ ಕರಗುಪ್ಪಿ, ಗುರುಪ್ರಸಾದ್ ಗಣಾಚಾರಿ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net