

ದಾಬಸ್‌ಪೇಟೆ : ನೆಲಮಂಗಲ ತಾಲೂಕು ಸೋಂಪುರ ಹೋಬಳಿಯಾದ್ಯಂತ ಚಿರತೆ ಹಾವಳಿ ಮಿತಿಮೀರಿದ್ದು,
ಕಾಡಂಚಿನ ಗ್ರಾಮಗಳ ಜನರನ್ನು ಆತಂಕ್ಕೀಡು ಮಾಡಿದೆ.
ಸಾಕು ನಾಯಿ, ಮೇಕೆ ಕುರಿ ಕೋಳಿಗಳನ್ನು ಹೊತ್ತೊಯ್ಯುತ್ತಿದ್ದ ಚಿರತೆಗಳು ಇತ್ತೀಚೆಗೆ ಶಿವಗಂಗೆ ಬೆಟ್ಟದ ಕಾಡಂಚಿನ ಕಂಬಾಳು ಗೊಲ್ಲರಹಟ್ಟಿಯಲ್ಲಿ ಕರಿಯಮ್ಮ ಅವರನ್ನು ಎಳೆದೊಯ್ದು ತಿಂದಿದ್ದು ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ನರಭಕ್ಷಕ ಚಿರತೆ ಹಿಡಿಯಲು ದುರಂತ ನಡೆದ ದಿನದಿಂದ ಬೋನುಗಳನ್ನಿಟ್ಟು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದು, ಈವರೆಗೆ 2 ಗಂಡು 1 ಹೆಣ್ಣು ಚಿರತೆ ಸೆರೆಯಾಗಿದೆ.
ಇತ್ತ ನರಸೀಪುರ ಪಂಚಾಯಿತಿ ವ್ಯಾಪ್ತಿಯ ಹೆಗ್ಗುಂದ ಬೆಟ್ಟಕ್ಕೆ ಹಾಗೂ ಕಾಡಿಗೆ ಹೊಂದಿಕೊಂಡಂತೆ ಬುಧವಾರ ಸಂಜೆ 4.30ರ ಸಮಯದಲ್ಲಿ ಕೆರೆಪಾಳ್ಯ ಗ್ರಾಮದ ಕಡೆ ಬಂಡೆಯ ಮೇಲೆ ಕಾಣಿಸಿಕೊಂಡಿದ್ದು ಹೆಗ್ಗುಂದ, ಕೆರೆಪಾಳ್ಯ ಸುತ್ತಮುತ್ತಲ ಗ್ರಾಮದ ಭಯಗೊಂಡಿದ್ದಾರೆ.
ವೆಂಕಟೇಶ್ ಎಂಬುವವರು ಹೊಲದ ಬಳಿ ಹೋಗಿದ್ದಾಗ ಚಿರತೆ ಬಂಡೆಯ ಮೇಲೆ ಮಲಗಿರುವುದನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಎರಡು ವರ್ಷಗಳ ಹಿಂದೆ ಇದೆ ಹೆಗ್ಗುಂದ ಬೆಟ್ಟದ ವೀರಭದ್ರ ಸ್ವಾಮಿ ದೇವಾಲಯದ ಬಳಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದವು.
ಮೂರ್ನಾಲ್ಕು ದಿನಗಳಿಂದ ಚಿರತೆ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಫೋಟೋ ತೆಗೆಯಲು ಭಯ ಆಗುತ್ತಿತ್ತು. ಬುಧವಾರ ವಿಡಿಯೋ ಮಾಡಿದೆ ಎಂದರು ವೆಂಕಟೇಶ್.
ಈ ನಡುವೆ ಅಂಜನಾದ್ರಿ ಲೇಔಟ್‌ನಲ್ಲಿ ಮನೆ ಬಾಗಿಲಿನಲ್ಲಿದ್ದ ನಾಯಿಯನ್ನು ಬುಧವಾರ ರಾತ್ರಿ ಚಿರತೆ ಹೊತ್ತೊಯ್ದಿದ್ದು, ಈ ದೃಶ್ಯ ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಾಯಿಗಳು ಕಾಣೆ!
ನಮ್ಮ ಮನೆಯ ಬಳಿ ಏಳೆಂಟು ಬೀದಿ ನಾಯಿಗಳು ಇದ್ದವು. ಹದಿನೈದು ದಿನಗಳಿಂದ ಅವುಗಳಲ್ಲಿ ಮೂರು ನಾಯಿಗಳು ಇಲ್ಲ. ಕೆಲ ದಿನಗಳ ಹಿಂದೆ ಮನೆಯ ಪಕ್ಕದಲ್ಲಿ ನಾಯಿಯೊಂದರ ಕತ್ತು ಕಡಿದು ಹಾಕಿದ್ದು ಕಂಡು ಬಂದಿತ್ತು. ಆಗಲೇ ಚಿರತೆ ಇರಬಹುದಾ ಅನ್ನುವ ಅನುಮಾನ ಮೂಡಿತ್ತು ಎಂದು ಸಂಶಯ ವ್ಯಕ್ತಪಡಿಸಿದರು ರಮೇಶ್.
ಸೆರೆಗೆ ಶೀಘ್ರ ಬೋನು
ಕಾಡು ಪ್ರದೇಶ ಕಡಿಮೆ ಆಗಿ, ಚಿರತೆಗಳಿಗೆ ಆಹಾರ ಸಿಗದೆ ಅನಿವಾರ್ಯವಾಗಿ ಊರುಗಳಿಗೆ ಬರುತ್ತಿವೆ. ಸದ್ಯ ಕಂಬಾಳು ಗೊಲ್ಲರಹಟ್ಟಿಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, ಅಲ್ಲಿ ಮುಗಿದ ಮೇಲೆ ಈ ಭಾಗದಲ್ಲಿ ಬೋನು ಇಟ್ಟು ಚಿರತೆ ಹಿಡಿಯಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.