ನಿಲ್ಕುಂದ ದೇವಿಮನೆಯಲ್ಲಿ ಚಿರತೆ ಕಾಟ

CHIRATE DALI
Published on

ಸಿದ್ದಾಪುರ: ತಾಲೂಕಿನ ನಿಲ್ಕುಂದ ಗ್ರಾಮದ ದೇವಿಮನೆ ದೇವಸ್ಥಾನದ ಹತ್ತಿರ ಚಿರತೆ ಕಾಟ ಹೆಚ್ಚಾಗುತ್ತಿದ್ದು, ಸಾಕು ನಾಯಿ ಚಿರತೆಗೆ ಆಹಾರವಾಗಿದ್ದರೆ ಬೈಕ್ ಮೇಲೆ ಹೋಗುವವರಿಗೆ ಯಾವ ಸಮಯದಲ್ಲಿ ಎಲ್ಲಿ ದಾಳಿ ನಡೆಸುತ್ತದೆಯೋ ಎನ್ನುವ ಭಯ ಉಂಟಾಗಿದೆ.
ನಿಲ್ಕುಂದ ದೇವಿಮನೆ ಸುತ್ತಮುತ್ತ ಮೂರ‌್ನಾಲ್ಕು ಚಿರತೆಗಳಿವೆ ಎಂದು ಸ್ಥಳೀಯರು ಹೇಳುತ್ತಿದ್ದು ಅವುಗಳಲ್ಲಿ ಒಂದು ಚಿರತೆ ಮಾತ್ರ ನಿಲ್ಕುಂದ-ದೇವಿಮನೆ-ಹುಕ್ಕಳಿ ರಸ್ತೆಯಲ್ಲಿ ಹಗಲಿನಲ್ಲಿ ಬೈಕ್‌ನಲ್ಲಿ ಹೋಗುವವರ ಮೇಲೆ ದಾಳಿ ನಡೆಸುತ್ತಿದೆ. ಶ್ರೀಪತಿ ಹೆಗಡೆ ಕಟ್ಟಿನಕಾನ ಅವರು ಬೈಕ್ ಮೇಲೆ ಹೋಗುವಾಗ ಅವರ ಮೇಲೆರಗಿ ಗಾಯಗೊಳಿಸಿದೆ. ದೇವಿಮನೆ ದೇವಸ್ಥಾನಕ್ಕೆ ಬರುವ ಬಂದು ಹೋಗುವ ಭಕ್ತರ ಮೇಲೆ ದಾಳಿ ನಡೆಸುತ್ತಿರುವುದರಿಂದ ಬೈಕ್ ಸವಾರರು ಎಚ್ಚರಿಕೆಯಿಂದ ಬಂದು ಹೋಗುವಂತಾಗಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.
ಈ ಚಿರತೆ ಕಪ್ಪು ಬಿಳೆ ಹಂಡದಾಗಿದ್ದು, ಇದು ರಾತ್ರಿ ಸಮಯದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಗಲಿನಲ್ಲಿ ನಡೆದು ಹೋಗುವವರ ಮೇಲೆ ದಾಳಿ ಮಾಡುತ್ತಿಲ್ಲ. ಬೈಕ್ ಮೇಲೆ ಬಂದವರ ಮೇಲೆ ಎಗರುತ್ತದೆ. ಅದರಲ್ಲಿಯೂ ನಿತ್ಯ ಕಂಡು ಬರುವುದಿಲ್ಲ. ವಾರದಲ್ಲಿ ಒಂದೆರಡು ದಿನ ಕಾಣಿಸಿಕೊಳ್ಳುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ ಮೂರ‌್ನಾಲ್ಕು ದಿನದ ಹಿಂದೆ ಸಂಜೆ ಸಮಯದಲ್ಲಿ ಕಟ್ಟಿನಕಾನಿನ ಶ್ರೀಪತಿ ಹೆಗಡೆ ಅವರ ಮನೆ ಹತ್ತಿರ ಎರಡು ಮರಿ ಹಾಗೂ ದೊಡ್ಡ ಚಿರತೆ ಕಾಣಿಸಿಕೊಂಡಿದ್ದರಿಂದ ಜನತೆ ಮತ್ತಷ್ಟು ಆತಂಕಗೊಂಡಿದ್ದಾರೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.
ದೇವಿಮನೆ ಸೂರ್ಯನಾರಾಯಣ ಹೆಗಡೆ ಅವರ ಮನೆಯ ಸಾಕು ನಾಯಿ ಚಿರತೆಗೆ ಆಹಾರವಾಗಿರುವುದರಿಂದ ಸಂಬಂಧ ಅರಣ್ಯ ಇಲಾಖೆಯವರು ಜನರ ಆತಂಕವನ್ನು ದೂರ ಮಾಡುವಲ್ಲಿ ಕೈಜೋಡಿಸಿ ಚಿರತೆಯ ಕಾಟ ದೂರಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚಿರತೆಯ ಓಡಾಟ ಕಂಡುಹಿಡಿಯುವುದಕ್ಕಾಗಿ ಕೆಲವೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ, ಈವರೆಗೂ ಎಲ್ಲಿಯೂ ಕಂಡು ಬಂದಿಲ್ಲ. ನಿಲ್ಕುಂದ-ದೇವಿಮನೆ ಹತ್ತಿರ ಚಿರತೆ ಓಡಾಟ ಇರುವುದು ನಿಜ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net