

ಮಂಡ್ಯ: ತಾಲೂಕಿನ ಮಂಗಲ ಗ್ರಾಮದ ಹೊರವಲಯದಲ್ಲಿ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಯನ್ನು ಚಿರತೆ ಕೊಂದು ಹೊತ್ತೊಯ್ದಿದೆ.
ಗ್ರಾಮದ ನಿವಾಸಿ ಮೀನಾಕ್ಷಿ ಸಣ್ಣೇಗೌಡ ಎಂಬುವರಿಗೆ ಸೇರಿದ ಮೇಕೆಯನ್ನು ಚಿರತೆ ಬಲಿ ಪಡೆದಿದೆ. ಲೋಕಸರ ರಸ್ತೆಯಲ್ಲಿ ಭೂತಮ್ಮನಹಳ್ಳದ ಬಳಿಯ ಕಾಳೇಗೌಡ ಎಂಬುವರ ಜಮೀನಿನಲ್ಲಿ ಹಸು ಹಾಗೂ ಮೇಕೆಯನ್ನು ಮೇಯಲು ಬಿಟ್ಟಿದ್ದರು. ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಚಿರತೆಯೊಂದು ದಾಳಿ ಮಾಡಿ ಮೇಕೆಯನ್ನು ಕಚ್ಚಿಕೊಂಡು ಕಬ್ಬಿನ ಗದ್ದೆಯೊಳಗೆ ನುಗ್ಗಿದೆ.
ಮೀನಾಕ್ಷಿ ಅವರು ಸಹಾಯಕ್ಕಾಗಿ ಕೂಗಿಕೊಂಡು ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದ್ದರು. ಆದರೆ, ಎಂಟತ್ತು ಎಕರೆ ಪ್ರದೇಶದಲ್ಲಿ ಕಬ್ಬಿನ ಗದ್ದೆಯೊಳಗೆ ಯಾವ ಪ್ರದೇಶದಲ್ಲಿ ಚಿರತೆ ಇದೆ ಎಂಬುದು ಯಾರಿಗೂ ತಿಳಿದಿಲ್ಲ. ಘಟನೆ ಸಂಬಂಧ ಗ್ರಾಮಸ್ಥರು ಗ್ರಾಮಲೆಕ್ಕಾಧಿಕಾರಿ, ಕಂದಾಯಾಧಿಕಾರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಜನರು ನಿತ್ಯ ಓಡಾಡುವ ಮಾರ್ಗದಲ್ಲಿ ಹಗಲಲ್ಲೆ ಚಿರತೆ ಕಾಣಿಸಿಕೊಂಡಿರುವುದರಿಅದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಚಿರತೆಯನ್ನು ಸೆರೆ ಹಿಡಿದು ಜನರು ಆತಂಕ ನಿವಾರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.