

ಮುಂಡಗೋಡ: ತಾಲೂಕಿನ ನಂದಿಗಟ್ಟ ಭಾಗದಲ್ಲಿ ಮರಿಯೊಂದಿಗೆ ಚಿರತೆಯೊಂದು ಸಂಚಾರ ನಡೆಸಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ. ನಾಲ್ಕೈದು ದಿನಗಳ ಹಿಂದೆ ಚಿರತೆಯೊಂದು ಹೊಲದಲ್ಲಿನ ನಾಯಿಯೊಂದನ್ನು ಹೊತ್ತುಕೊಂಡು ಹೋಗಿ ತಿಂದು ಹಾಕಿತ್ತು. ಮರಿಯೊಂದಿಗೆ ಚಿರತೆಯು ಗದ್ದೆಯಲ್ಲಿ ಸಂಚರಿಸುತ್ತಿರುವುದನ್ನು ಕಂಡು ರೈತರು ಭಯಭೀತರಾಗಿದ್ದಾರೆ. ಗದ್ದೆಗಳಲ್ಲಿ ಚಿರತೆ ಹಾಗೂ ಮರಿಯ ಹೆಜ್ಜೆಯ ಗುರುತುಗಳು ಕಂಡು ಬಂದಿವೆ.
ವಿಷಯ ತಿಳಿದ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಸುರೇಶ ಕಳ್ಳೊಳ್ಳಿ ಬುಧವಾರ ಸಿಬ್ಬಂದಿ ಜತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಜ್ಜೆ ಗುರುತುಗಳನ್ನು ಪರಿಶೀಲಿಸಿ, ಅವು ಚಿರತೆಯದ್ದೇ ಎಂದು ದೃಢಪಡಿಸಿದ್ದಾರೆ.
ನಂದಿಗಟ್ಟ, ಬಸಾಪುರ, ಹುಲಿಹೊಂಡ ಗ್ರಾಮಗಳ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಗದ್ದೆಗಳಿಗೆ ಒಬ್ಬೆರೇ ತೆರಳಬಾರದು. ರಾತ್ರಿಯ ವೇಳೆ ಗದ್ದೆಗಳಲ್ಲಿ ಒಬ್ಬರೇ ಮಲಗಬಾರದು. ಒಂದು ವೇಳೆ ಯಾರಿಗಾದರೂ ಚಿರತೆ ಕಂಡು ಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಧ್ವನಿವರ್ಧಕದ ಮೂಲಕ ಬುಧವಾರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ.
ಚಿರತೆ ಪ್ರತ್ಯಕ್ಷವಾದ ಸುದ್ದಿ ಹರಡುತ್ತಿದ್ದಂತೆ ಈ ಭಾಗದಲ್ಲಿನ ರೈತರು ಭಯಭೀತರಾಗಿದ್ದು ಗದ್ದೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯುವ ಮೂಲಕ ಸಾರ್ವಜನಿಕರಲ್ಲಿನ ಭಯದ ವಾತಾವರಣ ಹೋಗಲಾಡಿಸುವುದು ಅವಶ್ಯವಾಗಿದೆ.