

ತುಬಚಿ: ಹಲವು ತಿಂಗಳುಗಳ ಹಿಂದೆ ಜಮಖಂಡಿ ತಾಲೂಕಿನ ವಿವಿಧೆಡೆ ಭೀತಿ ಉಂಟು ಮಾಡಿದ್ದ ಚಿರತೆ ಹಾವಳಿ ಮತ್ತೆ ಶುರುವಾಗಿದೆ. ಈ ಮೊದಲು ಕುಂಬಾರಹಳ್ಳ, ಚಿಕ್ಕಪಡಸಲಗಿಯಲ್ಲಿ ಕಾಡುಪ್ರಾಣಿ ಕಾಣಿಸಿಕೊಂಡು ಜನರಲ್ಲಿ ಭಯ ಉಂಟು ಮಾಡಿತ್ತು. ಈಗ ಹೊಳೆಸಾಲಿನಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ರೈತರ ನಿದ್ದೆಗೆಡಿಸಿದೆ.
ಜಮಖಂಡಿ ತಾಲೂಕಿನ ಜಂಬಗಿ ಕೆ.ಡಿ.-ತುಂಗಳ ರಸ್ತೆ ಮಾರ್ಗ ಮಧ್ಯೆ ಹಾಗೂ ಜಂಬಗಿ ಕೆ.ಡಿ. ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಜಂಬಗಿ ಕೆ.ಡಿ. ಹಾಗೂ ಅದರ ಸಮೀಪದ ಗ್ರಾಮಗಳ ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ತೋಟದ ವಸ್ತಿಯಲ್ಲಿರುವ ಗಿರಮಲ್ಲ ಬಿರಾದಾರ ಅವರ ಮನೆಯಲ್ಲಿನ ನಾಯಿ ಮರಿ ಮತ್ತು ಆಡನ್ನು ಗುರುವಾರ ಬೆಳಗ್ಗೆ ಚಿರತೆ ತಿಂದು ಹಾಕಿದೆ. ಚಿರತೆ ಆಕಾರದ ಕಾಡುಪ್ರಾಣಿ ನೋಡಿರುವುದಾಗಿ ರೈತರು ತಿಳಿಸಿದ್ದಾರೆ. ಸ್ಥಳಕ್ಕೆ ಸಾವಳಗಿ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಾಕು ಪ್ರಾಣಿಗಳನ್ನು ತಿಂದ ಕಾಡುಪ್ರಾಣಿ ಕತ್ತೆಕಿರಬು ಇರಬಹುದು ಎಂದು ಮೊದಲಿಗೆ ಅಂದಾಜಿಸಲಾಗಿತ್ತು. ಪ್ರಾಣಿಯ ಬೇಟೆ, ಹೆಜ್ಜೆ ಗುರುತು ಪರಿಶೀಲನೆ ಬಳಿಕ ಅದು ಕತ್ತೆಕಿರಬು ಅಲ್ಲ ಚಿರತೆ ಎನ್ನುವುದು ಬಹುತೇಕ ಖಚಿತವಾಗಿದೆ. ಅರಣ್ಯ ಇಲಾಖೆಯವರು ಕೂಲಂಕಷವಾಗಿ ಗಮನಿಸಿದ ಬಳಿಕ ಚಿರತೆ ಓಡಾಡಿದ ಸ್ಥಳದಲ್ಲಿ ಹದ್ದಿನ ಕಣ್ಣು ಇಟ್ಟು ಅದನ್ನು ಸೆರೆ ಹಿಡಿಯುವ ಪ್ರಯತ್ನ ನಡೆಸಿದ್ದಾರೆ.
ಸಾವಳಗಿ ಉಪವಲಯ ಅರಣ್ಯ ಅಧಿಕಾರಿ ಮಹೇಶ ಗುಡಿಮನಿ, ಸಿಬ್ಬಂದಿ ಮಲ್ಲಿಕಾರ್ಜುನ ಹಾರಗೊಂಡ, ಪ್ರಕಾಶ ಕರಾವಳಿ, ಈರಣ್ಣ ಪೋದ್ದಾರ, ಪೊಲೀಸ್ ಸಿಬ್ಬಂದಿ ವಿಶಾಲ್ ಭಜಂತ್ರಿ, ಶ್ರೀಶೈಲ ಜಂಬಗಿ ಇದ್ದರು.
ಸಾಕುಪ್ರಾಣಿ ಬೇಟೆಯಾಡಿದ ಪ್ರಾಣಿ ಚಿರತೆ ಎನ್ನುವುದು ದೃಢಪಟ್ಟಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಲ್ಲಲ್ಲಿ ಸಿಸಿ ಕ್ಯಾಮರಾ ಹಾಗೂ ಮಾಂಸ ಇಟ್ಟು ಬೋನಿಗೆ ಕೆಡವಲು ಪ್ರಯತ್ನಿಸಲಾಗುತ್ತಿದೆ. ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ದನಕರು, ನಾಯಿ, ವಿವಿಧ ಸಾಕುಪ್ರಾಣಿಗಳನ್ನು ಹೊರಗಡೆ ಕಟ್ಟಬಾರದು. ಚಿಕ್ಕ ಮಕ್ಕಳನ್ನು ಹೊರಗಡೆ ಬಿಡಬೇಡಿ. ಒಬ್ಬಂಟಿಯಾಗಿ ತಿರುಗಾಡಬೇಡಿ ಎಂದು ಜಮಖಂಡಿ ವಲಯ ಅರಣ್ಯಾಧಿಕಾರಿ ಕಿರಣ ದಾಸರೆಡ್ಡಿ ಮನವಿ ಮಾಡಿದ್ದಾರೆ.
ಚಿರತೆ ಓಡಾಟದ ವಿಷಯ ಗಮನಕ್ಕೆ ಬಂದಿದೆ. ಕೂಡಲೇ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳಲು ಸೂಚಿಸಿರುವೆ. -ಅನಿಲ ಬಡಿಗೇರ ಜಮಖಂಡಿ ತಹಸೀಲ್ದಾರ್ ಗ್ರಾಮದ ಜನರು ಭಯಪಡುವ ಅಗತ್ಯವಿಲ್ಲ. ಗ್ರಾಮದಲ್ಲಿ ಸಿಬ್ಬಂದಿಗೆ ರಾತ್ರಿ ಗಸ್ತು ತಿರುಗಾಡಲು ಸೂಚಿಸುತ್ತೇನೆ. ಜನರು ಕೂಡ ಜಾಗ್ರತೆಯಿಂದ ಇರಬೇಕು. ಜನರಿಗೆ ತೊಂದರೆಯಾಗದಂತೆ ನಾವು ಕಾಳಜಿ ವಹಿಸುತ್ತೇವೆ. -ಅಪ್ಪು ಐಗಳಿ ಪಿಎಸ್‌ಐ ಸಾವಳಗಿ ಪೊಲೀಸ್ ಠಾಣೆ