ಬೋನಿಗೆ ಬಿದ್ದ ಗಂಡು ಚಿರತೆ

HOSURU CHEETA
Published on

ಹೊಸೂರು: ತಮಿಳುನಾಡು ಡಂಕಣಿಕೋಟೆಯ ಇಸ್ಲಾಂಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಗಂಡು ಚಿರತೆ ಸೆರೆಯಾಗಿದೆ.

2 ವರ್ಷದ ಹಿಂದೆ ಬನ್ನೇರುಘಟ್ಟ ಅರಣ್ಯ ಪ್ರದೇಶದ ಕಡೆಯಿಂದ ಇಸ್ಲಾಂಪುರ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿತ್ತು ಎನ್ನಲಾದ 12 ವರ್ಷ ವಯೋಮಾನದ ಈ ಚಿರತೆ ಇಸ್ಲಾಂಪುರ ಸೇರಿ ಅಕ್ಕಪಕ್ಕದ ಗ್ರಾಮಗಳಲ್ಲಿ ಹಸು, ಕುರಿ, ಮೇಕೆ, ನಾಯಿಗಳನ್ನು ಬೇಟೆಯಾಡುವ ಮೂಲಕ ಗ್ರಾಮಸ್ಥರ ನಿದ್ರೆಗೆಡಿಸಿತ್ತು. ಚಿರತೆ ಮನುಷ್ಯರ ಮೇಲೂ ದಾಳಿ ನಡೆಸಬಹುದೆಂಬ ಆತಂಕದಲ್ಲಿ ಅರಣ್ಯದಂಚಿನ ಗ್ರಾಮಸ್ಥರು ಸಂಜೆ ಬಳಿಕ ಹೊಲಗದ್ದೆಗಳತ್ತ ಹೋಗಿಬರಲು ಹಿಂದೇಟು ಹಾಕುತ್ತಿದ್ದರು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಹಲವು ಬಾರಿ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು.

ಕಾರ್ಯಾಚರಣೆ: ಗ್ರಾಮಸ್ಥರ ಒತ್ತಡದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇಸ್ಲಾಂಪುರ ಅರಣ್ಯದಂಚಿನಲ್ಲಿ ಹಲವು ಕಡೆಗಳಲ್ಲಿ ಮೇಕೆಯನ್ನು ಕಟ್ಟಿ ಬೋನುಗಳನ್ನಿಟ್ಟು ಕಾರ್ಯಾಚರಣೆ ರೂಪಿಸಿದ್ದರು. ಹಲವು ದಿನಗಳ ಕಾರ್ಯಾಚರಣೆ ಬಳಿಕ ಶುಕ್ರವಾರ ಚಿರತೆ ಬೋನಿಗೆ ಬಿದ್ದಿದೆ. ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯಾಧಿಕಾರಿ ವಿಜಯನ್ ಮಾರುಣ್, ಡಂಕಣಿಕೋಟೆ ಇನ್‌ಸ್ಪೆಕ್ಟರ್ ವಿಜಯನ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net