ಮುಳಿಯಾರು, ಕಾನತ್ತೂರಿಲ್ಲಿ ಚಿರತೆ ಓಡಾಟ

Published on

ಕಾಸರಗೋಡು: ಮುಳಿಯಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ಚಿರತೆ ಸಂಚರಿಸುವುದು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಳಿಯಾರಿನ ಕಾನತ್ತೂರು ಮುಡಯಂ ವೀಟ್ಟಿಲ್ ನಿವಾಸಿ ರಾಜೀವನ್ ಎಂಬುವರ ಸಾಕುನಾಯಿಯನ್ನು ಮನೆಯವರ ಕಣ್ಣಮುಂದೆಯೇ ಚಿರತೆ ಹೊತ್ತೊಯ್ದಿದೆ.

ಭಾನುವಾರ ಸಂಜೆ ವೇಳೆಗೆ ಗೂಡಿಂದ ಹೊರಬಿಡಲಾಗಿತ್ತು. ಹೊರಹೋಗಿದ್ದ ನಾಯಿಯನ್ನು ಕರೆದಾಗ ಚಿರತೆಯೊಂದು ನಾಯಿ ಮೇಲೆ ದಾಳಿ ನಡೆಸಿ ಹೊತ್ತೊಯ್ದಿರುವುದಾಗಿ ರಾಜೀವನ್ ತಿಳಿಸಿದ್ದಾರೆ. ಕಾನತ್ತೂರು ಅಲ್ಲದೆ, ಬೀಟಿಯಡ್ಕ, ನೆಯ್ಯಂಗಯ, ಕೊಟ್ಟಂಗುಳಿ, ಪಾನೂರು ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಸಾಕುನಾಯಿಗಳು ಹಾಗೂ ಜಾನುವಾರುಗಳು ನಾಪತ್ತೆಯಾಗುತ್ತಿರುವುದು ಸಾಮಾನ್ಯವಾಗಿದ್ದು, ಚಿರತೆ ಹೊತ್ತೊಯ್ಯುತ್ತಿರಬೇಕೆಂದು ಸಂಶಯಿಸಲಾಗುತ್ತಿದೆ.

ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಚಿರತೆ ಸಂಚಾರದ ಬಗ್ಗೆ ದೂರು ಲಭಿಸಿದ್ದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸಿಸಿ ಕ್ಯಾಮರಾ ಅಳವಡಿಸಿದ್ದು, ಇದರಲ್ಲಿ ಚಿರತೆ ಸಂಚಾರದ ದೃಶ್ಯಾವಳಿ ಸೆರೆಯಾಗಿದೆ. ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಬೋನು ಅಳವಡಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು, ಸಂಜೆ ಸಮಯದ ನಂತರ ಮನೆಯಿಂದ ಹೊರಬರಲೂ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net