

ಗುಂಡ್ಲುಪೇಟೆ: ಮರದ ನಡುವೆ ಹಾದುಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೂರು ವರ್ಷದ ಹೆಣ್ಣು ಚಿರತೆ ಸಾವಿಗೀಡಾಗಿರುವುದು ಶನಿವಾರ ಬೆಳಕಿಗೆ ಬಂದಿದೆ.
ಬಂಡೀಪುರ ಹುಲಿ ಯೋಜನೆಯ ಬಫರ್ ವಲಯದ ನೇನಕಟ್ಟೆ ಗ್ರಾಮದ ಬಳಿ ಚಿರತೆ ಮರವೇರುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ಮೃತಪಟ್ಟಿದೆ. ವಿಷಯ ತಿಳಿದ ಹುಲಿ ಯೋಜನೆಯ ನಿರ್ದೇಶಕ ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ, ಪ್ರಭಾರ ವಲಯಾರಣ್ಯಾಧಿಕಾರಿ ಮಲ್ಲೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಅರಣ್ಯ ಇಲಾಖೆಯ ಪಶುವೈದ್ಯ ಡಾ.ವಾಸಿಂ ಮಿರ್ಜಾ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಗಳನ್ವಯ ಚಿರತೆ ಕಳೇಬರವನ್ನು ಅರಣ್ಯ ಪ್ರದೇಶದಲ್ಲಿ ಸುಡಲಾಯಿತು.