ತಾಯಿ ಮಡಿಲು ಸೇರಿದ ಚಿರತೆ ಮರಿಗಳು

chirathe (1)
Published on

ಮೈಸೂರು: ತಾಲೂಕಿನ ಆಯರಹಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ರಕ್ಷಿಸಲಾಗಿದ್ದ 3 ಚಿರತೆ ಮರಿಗಳನ್ನು ಮತ್ತೆ ತಾಯಿ ಚಿರತೆಯೊಂದಿಗೆ ಕಾಡಿಗೆ ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಡಿ.6 ರಂದು ಆಯರಹಳ್ಳಿ ಗ್ರಾಮದ ದ್ಯಾವಣ್ಣನಾಯಕ ಎಂಬುವವರ ಜಮೀನಿನಲ್ಲಿ ರೈತರು ಕಬ್ಬು ಕಟಾವು ಮಾಡುವ ವೇಳೆ ಚಿರತೆ ಮರಿಗಳು ಸಿಕ್ಕಿದ್ದವು. 3 ಮರಿಗಳ ಪೈಕಿ 1 ಕಪ್ಪು ಬಣ್ಣದ ಚಿರತೆ ಮರಿಯಾಗಿತ್ತು. ರೈತರು ಚಿರತೆ ಮರಿಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದರು.

ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಮರಿಗಳ ಸಿಕ್ಕ ಸ್ಥಳದಲ್ಲಿಯೇ ಇಟ್ಟಿದ್ದ ಬೋನಿಗೆ ತಾಯಿ ಚಿರತೆಯೂ ಬಿದ್ದಿತ್ತು. ನಂತರ ತಾಯಿ ಹಾಗೂ ಮರಿ ಚಿರತೆಗಳನ್ನು ಚಾಮುಂಡಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಿ, ನುರಿತ ವೈದ್ಯ ತಂಡದಿಂದ ಮೂರು ದಿನಗಳವರೆಗೆ ನಿಗಾ ವಹಿಸಲಾಗಿತ್ತು. ಐದನೇ ದಿನ ತಾಯಿ ಹಾಗೂ ಮರಿ ಚಿರತೆಗಳನ್ನು ಕಾಡಿಗೆ ಕೊಂಡೊಯ್ಯಲು ಸಾಗಣೆ ಬೋನಿನಲ್ಲಿ ಇರಿಸಲಾಯಿತು.

ಚಿರತೆಯನ್ನು ಬಿಡುಗಡೆಗೊಳಿಸುವ ಸಂದರ್ಭದಲ್ಲಿ ತಾಯಿ ಚಿರತೆಯು ಮರಿಗಳನ್ನು ಬಿಟ್ಟು ಹೋಗದಂತೆ ತಡೆಯಲು ಅರಣ್ಯ ಪ್ರದೇಶದಲ್ಲಿರುವ ಕೊಠಡಿಯಲ್ಲಿ ಮತ್ತೆ ಮರಿಗಳೊಂದಿಗೆ ಚಿರತೆಯನ್ನು ಬಿಡಲಾಯಿತು. ಆರನೇ ದಿನದಂದು ತಾಯಿ ಚಿರತೆಯು ಕೊಠಡಿಯ ಕಿಟಕಿಯನ್ನು ಮುರಿದು ಹೊರಗೆ ಬಂದು ಸುರಕ್ಷಿತ ಆವಾಸ ಸ್ಥಾನದ ಹುಡುಕಾಟವನ್ನು ಮಾಡಿದೆ.

ಒಂಬತ್ತನೇ ದಿನದಂದು ತಾಯಿ ಚಿರತೆಯು ವಾಪಸ್ ಬಂದು ಕಪ್ಪು ಚಿರತೆ ಮರಿ ಸೇರಿದಂತೆ 2 ಚಿರತೆಯ ಮರಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿದೆ. ಹತ್ತನೇ ದಿನವಾದ ಶುಕ್ರವಾರ ಉಳಿದ ಒಂದು ಚಿರತೆ ಮರಿಯನ್ನು ತೆಗೆದುಕೊಂಡು ಹೋಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎಸ್.ಬಸವರಾಜು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net