

ನಾಗಮಂಗಲ: ತಾಲೂಕಿನ ಚೋಳೇನಹಳ್ಳಿ ಗ್ರಾಮ ಹೊರವಲಯದಲ್ಲಿ ಗುರುವಾರ ಕಾಣಿಸಿಕೊಂಡಿದ್ದ 7ತಿಂಗಳ ಹೆಣ್ಣು ಚಿರತೆ ಮರಿಯೊಂದನ್ನು ಸ್ಥಳೀಯರ ನೆರವಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಪಟ್ಟಣದ ಅರಣ್ಯಾಧಿಕಾರಿ ಕಚೇರಿಗೆ ತಂದ ಕಲವೇ ಹೊತ್ತಿನಲ್ಲಿ ಮರಿ ಮೃತಪಟ್ಟಿದೆ.
ತಾಯಿಯಿಂದ ಬೇರ್ಪಟ್ಟಿದ್ದ 7ತಿಂಗಳ ಹೆಣ್ಣು ಚಿರತೆ ಮರಿ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಆತಂಕಗೊಂಡ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬಿಂಡಿಗನವಿಲೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ, ಚಿರತೆ ಮರಿ ಸ್ಥಳದಿಂದ ಕದಲದಂತೆ ನೂರಾರು ಜನರು ಸುತ್ತುವರಿದು ನಿಂತಿದ್ದರು.
ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ವಲಯ ಅರಣ್ಯಾಧಿಕಾರಿ ಸಂಪತ್‌ಪಟೇಲ್, ಚಿರತೆ ಮರಿಯನ್ನು ಸುರಕ್ಷಿತವಾಗಿ ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಡಿಸುವ ಸಲುವಾಗಿ ಮೈಸೂರಿನ ಚಿರತೆ ಕಾರ್ಯಪಡೆ (ಎಲ್‌ಟಿಎಫ್) ಸಿಬ್ಬಂದಿಗಳನ್ನು ಕಳುಹಿಸಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮನವಿ ಮಾಡಿದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಚಿರತೆ ಕಾರ್ಯಪಡೆ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಸ್ಥಳೀಯರ ಜತೆಗೂಡಿ ಚಿರತೆ ಮರಿಯನ್ನು ಹಿಡಿದಿದ್ದ ಅರಣ್ಯ ಸಿಬ್ಬಂದಿ ಪಟ್ಟಣದ ಅರಣ್ಯಾಧಿಕಾರಿ ಕಚೇರಿಗೆ ತಂದಿದ್ದರು. ಹಿಡಿಯುವ ಸಮಯದಲ್ಲಿ ಹೊಟ್ಟೆಯ ಭಾಗ ಮತ್ತು ಕಾಲುಗಳನ್ನು ಟವಲ್‌ನಿಂದ ಬಿಗಿದಿದ್ದ ಹಿನ್ನೆಲೆಯಲ್ಲಿ ತಕ್ಷಣ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ ಬಳಿಕ ತಿನ್ನಲು ಆಹಾರ ಹಾಕಿದ್ದರು. ಆದರೆ ಅಸ್ವಸ್ಥಗೊಂಡಿದ್ದ ಚಿರತೆ ಮರಿ ಕೆಲವೇ ಹೊತ್ತಿನಲ್ಲಿ ಮೃತಪಟ್ಟಿತು.
ಪಶು ವೈದ್ಯರು ಪಂಚನಾಮೆ ನಡೆಸಿದ ಬಳಿಕ ಇಲಾಖೆ ನಿಯಮಾನುಸಾರ ತಾಲೂಕಿನ ಎಂ.ಹೊಸೂರು ಗೇಟ್ ಬಳಿಯಿರುವ ಅರಣ್ಯ ಪ್ರದೇಶದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.