

ತುಮಕೂರು: ಹೆಬ್ಬೂರು ಹೋಬಳಿ ನಿಡವಳಲು ಗ್ರಾಪಂ ವ್ಯಾಪ್ತಿಯ ತಾವರೆಕೆರೆಯಲ್ಲಿ ಬುಧವಾರ ರಾತ್ರಿ ಮತ್ತೊಂದು ಚಿರತೆ ಸೆರೆ ಸಿಕ್ಕಿದೆ. ಕಳೆದೊಂದು ವಾರದಲ್ಲಿ ಸೆರೆ ಸಿಕ್ಕಿ ಎರಡನೇ ಚಿರತೆ ಇದಾಗಿದ್ದು, 5-6 ತಿಂಗಳಿಂದ ಭೀತಿಯಲ್ಲಿದ್ದ 3 ತಾಲೂಕುಗಳ ಜನರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ಬುಧವಾರ ತಾಲೂಕಿನ ಹಾಲನೂರು ಗ್ರಾಮ ಆಚಾರಪಾಳ್ಯ ರಸ್ತೆ, ಹೇಮಾವತಿ ಚಾನಲ್ ಟನಲ್‌ನಲ್ಲಿ ಅಡಗಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದರು. ಬುಧವಾರ ರಾತ್ರಿ ಬೋನಿಗೆ ಬಿದ್ದಿರುವ ಚಿರತೆ 4-5 ವರ್ಷದ್ದಾಗಿದ್ದು, ಸುರಕ್ಷಿತವಾಗಿ ಕಾಡಿಗೆ ಬಿಡಲು ಕೊಂಡೊಯ್ಯಲಾಗಿದೆ. ಇದು ನರಭಕ್ಷಕ ಚಿರತೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ಚಿರತೆ ಬೋನಿಗೆ ಬಿದ್ದಿರುವ ಸ್ಥಳವು ಮಾನವ ಹತ್ಯೆ ನಡೆದಿರುವ ಸ್ಥಳದಿಂದ ಕೇವಲ 10ಕಿಮೀ., ಅಂತರದಲ್ಲಿದ್ದು ಸಹಜವಾಗಿ ನರಭಕ್ಷಕ ಚಿರತೆ ಎಂಬ ಅನುಮಾನಗಳು ಹೆಚ್ಚಿವೆ. ಗಂಡು ಚಿರತೆ ಬಲಿಷ್ಠವಾಗಿದ್ದು ನರಭಕ್ಷಕ ಚಿರತೆ ಇರಬೇಕೆಂಬುದು ನಮ್ಮ ನಂಬಿಕೆ ಎಂದು ಡಿಎಫ್‌ಒ ಎಚ್.ಸಿ.ಗಿರಿಶ್ ‘ವಿಜಯವಾಣಿ’ಗೆ ತಿಳಿಸಿದರು.
2 ಚಿರತೆ ಸೆರೆ: ಸಾರ್ವಜನಿಕ ಮಾಹಿತಿ ಹಾಗೂ ಕ್ಯಾಮರಾ ಟ್ರಾಪ್‌ಗಳಲ್ಲಿ ಸೆರೆಯಾಗಿರುವ ದೃಶ್ಯಗಳ ಆಧಾರದ ಮೇಲೆ ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಚಿರತೆಗಳು ಇರುವುದು ಖಚಿತವಾಗಿದ್ದು, ಈ ಭಾಗದಲ್ಲಿ 4 ನರಭಕ್ಷಕ ಚಿರತೆಗಳಿವೆ ಎಂಬುದು ಅರಣ್ಯ ಇಲಾಖೆ ಅನುಮಾನವಾಗಿದೆ. ಈಗಾಗಲೇ ಒಂದು ಹೆಣ್ಣು, ಗಂಡು ಚಿರತೆ ಸೆರೆ ಸಿಕ್ಕಿರುವುದರಿಂದ ಇಲಾಖೆ ಸಿಬ್ಬಂದಿ ಸಹ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನೆರಡು ಶಂಕಿತ ನರಭಕ್ಷಕ ಚಿರತೆಗಳನ್ನು ತ್ವರಿತವಾಗಿ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯ
ಇಲಾಖೆ ಮುಂದುವರಿಸಿದೆ.
ಆನೆ ಕಾರ‌್ಯಾಚರಣೆಗಿಲ್ಲ ಕರೊನಾ ಅಡ್ಡಿ !: ಕರೊನಾ ಎಫೆಕ್ಟ್ ನಡುವೆಯೂ ಮನುಷ್ಯನನ್ನು ಹತ್ಯೆಗೈದಿರುವ ತುಮಕೂರು, ಕುಣಿಗಲ್, ಗುಬ್ಬಿ ಈ 3 ತಾಲೂಕುಗಳು ಹೊಂದಿಕೊಂಡಿರುವ ಗಡಿಭಾಗದ ಪ್ರದೇಶಗಳಲ್ಲಿ ಆನೆ ಕಾರ್ಯಾಚರಣೆ ಮುಂದುವರಿದಿದೆ. ಕರೊನಾ ವೈರಸ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿರುವ 25 ಸಿಬ್ಬಂದಿಗೆ ಮಾಸ್ಕ್‌ಗಳನ್ನು ಧರಿಸುವಂತೆ ಹಾಗೂ ಜನದಟ್ಟಣೆ ಇರುವ ಕಡೆ ಹೋಗದಂತೆ ಸೂಚನೆ ನೀಡಲಾಗಿದೆ ಎಂದು ಡಿಎಫ್‌ಒ ಗಿರೀಶ್ ತಿಳಿಸಿದರು.
ನರಭಕ್ಷಕ ಚಿರತೆ ಎಂದು ಖಚಿತವಾಗಿ ಹೇಳಲು ನಮ್ಮಲ್ಲಿ ಯಾವುದೇ ಆಧಾರವಿಲ್ಲ, ಆದರೆ, 4-5 ವರ್ಷದ ಅತ್ಯಂತ ಬಲಿಷ್ಠ ಗಂಡು ಚಿರತೆ ಇದಾಗಿದ್ದು ಇದನ್ನು ದೂರದ ಕಾಡಿಗೆ ಬಿಡಲಾಗುವುದು. ಅಲ್ಲಿನ ಸ್ಥಳೀಯರು ಭಯಬೀಳುವುದರಿಂದ ಯಾವ ಕಾಡು ಎಂಬುದನ್ನು ಬಹಿರಂಗಪಡಿಸಲಾಗುವುದಿಲ್ಲ. ಎಚ್.ಸಿ.ಗಿರೀಶ್ ಡಿಎಫ್‌ಒ