ಎಚ್.ಡಿ.ಕೋಟೆಯಲ್ಲಿ ಚಿರತೆ ಸೆರೆ

04HDK00007
ಎಚ್.ಡಿ.ಕೋಟೆ ಪಟ್ಟಣದಲ್ಲಿ ಸೆರೆಯಾದ ಚಿರತೆ.
Published on

ಎಚ್ ಡಿ ಕೋಟೆ: ಪಟ್ಟಣದ ಡ್ರೈವರ್ ಕಾಲನಿ ಸಮೀಪದ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಮತ್ತೊಂದು ಏಳು ವರ್ಷದ ಗಂಡು ಚಿರತೆ ಶುಕ್ರವಾರ ಬೆಳಗಿನ ಜಾವ ಸೆರೆಯಾಗಿದೆ.

ಪಟ್ಟಣದಲ್ಲಿ ಚಿರತೆಗಳ ಹಾವಳಿ ಜಾಸ್ತಿಯಾಗಿ ರೈತರ ಜಮೀನುಗಳಲ್ಲಿ ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದು ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರು ಒತ್ತಾಯಿಸಿದ್ದರು.

ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ರೈತ ಗುರುಮಲ್ಲು ಅವರ ಜಮೀನಿನಲ್ಲಿ ಬೋನಿರಿಸಿದ್ದರು. ಸೆ.25ರಂದು ಏಳು ವರ್ಷದ ಗಂಡು ಚಿರತೆ ಬೋನಿನಲ್ಲಿ ಸೆರೆಯಾಗಿತ್ತು, ಸೆರೆಯಾದ ಚಿರತೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟು ಮತ್ತೆ ಅದೇ ಬೋನನ್ನು ಮತ್ತೆ ಅದೇ ಜಮೀನಿನಲ್ಲಿ ಇರಿಸಲಾಗಿತ್ತು, ಶುಕ್ರವಾರ ಬೆಳಗ್ಗೆ ಬೋನಿನಲ್ಲಿ ಮತ್ತೆ ಏಳು ವರ್ಷದ ಗಂಡು ಚಿರತೆ ಸೆರಿಯಾಗಿದೆ. ಗುರುವಾರ ರೈತ ಚೆನ್ನ ನಾಯಕ ಅವರ ಹಸುವನ್ನು ಕೊಂದು ಹಾಕಿದ್ದ ಚಿರತೆ ಶುಕ್ರವಾರ ಬೆಳಗಿನ ಜಾವ ಬೋನಿಗೆ ಬಿದ್ದಿದೆ.

ಸ್ಥಳಕ್ಕೆ ಆಗಮಿಸಿದ ಡಿಆರ್‌ಎಫ್ ಪರಮೇಶ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು. ಚಿರತೆಯನ್ನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net