

ರಾಯಚೂರು ನಗರದ ಮಲಿಯಬದ್‌ನ ಗೋ ಶಾಲೆಯ ಬೆಟ್ಟದಲ್ಲಿ ವಾಸ್ತವ್ಯವಿಟ್ಟು ಆತಂಕ ಸೃಷ್ಟಿಸುತ್ತಿದ್ದ ಎರಡನೇ ಚಿರತೆಯು ಸೋಮವಾರ ಬೆಳಗ್ಗಿನ ಜಾವ ಅರಣ್ಯ ಇಲಾಖೆಯ ಬೋನಿಗೆ ಬಿದ್ದು ಸೆರೆಯಾಗಿದೆ.
ಕಳೆದ ಸುಮಾರು ತಿಂಗಳಿಂದ ಸಾರ್ವಜನಿಕರ ನಿದ್ದೆಗೆಡಿದ ಎರಡು ಚಿರತೆಗಳ ಪೈಕಿ ಒಂದು ಚಿರತೆ ಸೆರೆಯಾಗಿತ್ತು. ಆದರೆ ಇನ್ನೊಂದು ಚಿರತೆ ಇದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದರಿಂದ ಸ್ಥಳೀಯ ಜನತೆಗೆ ಭಯ ಉಂಟುಮಾಡಲಾಗಿತ್ತು.
ಕಾರ್ಯಾಚರಣೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋವಿಂದರಾಜು.ಕೆ., ಪ್ರದೇಶಿಕ ಆರಣ್ಯ ಅಧಿಕಾರಿ ರಾಜೇಶ್ ನಾಯಕ್ ನೇತೃತ್ವದಲ್ಲಿ ಚಿರತೆ ಓಡಾಟ ಮಾಡುವ ಸ್ಥಳದಲ್ಲಿ ವಿಶೇಷ ಬೋನನ್ನು ಅಳವಡಿಸಲಾಗಿತ್ತು. ಕಳೆದ ಒಂದು ವಾರದಿಂದ ಬೋನಿಗೆ ಆಹಾರ ಇಟ್ಟು ಚಿರತೆಯ ಚಲನವಲನಗಳನ್ನು ಗಮನಿಸಲಾಗುತ್ತಿತ್ತು. ಅದರಂತೆ ಸೋಮವಾರ ಸಿಕ್ಕಿಬಿದ್ದಿದೆ. ಚಿರತೆ ಸೆರೆಯಾದ ಬಳಿಕ ತಕ್ಷಣವೇ ಸುರಕ್ಷಿತ ಪಂಜರದಲ್ಲಿ ಇರಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಆರೋಗ್ಯ ಸ್ಥಿರವಾಗಿದ್ದ ಕಾರಣ ಹತ್ತಿರದ ಅರಣ್ಯ ಪ್ರದೇಶದ ದಟ್ಟ ಕಾಡಿಗೆ ಬಿಟ್ಟುಕೊಡುವ ಸಿದ್ಧತೆ ಪ್ರಾರಂಭಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಮೌನೇಶ, ಅರಣ್ಯ ಪಾಲಕರಾದ ಬಸವರಾಜ್, ಯಲ್ಲಪ್ಪ, ಭೀಮೇಶ್, ವೀರೇಶ, ವೀಕ್ಷಕ ಕನಕಪ್ಪ, ಚಾಲಕ ವಿಜಯ್, ಮೌನೇಶ ಆಚಾರಿ, ಹಾಗೂ ದಿನಗೂಲಿ ನೌಕರರಾದ ನರಸಪ್ಪ, ರಮೇಶ್, ಮಂಜು, ಶಿವು ಅವರ ಮಹತ್ವದ ಪಾತ್ರ ವಹಿಸಿದ್ದಾರೆ.