ಅರಣ್ಯ ಇಲಾಖೆ ಬೋನಿನಲ್ಲಿ ಸೆರೆಯಾದ ಚಿರತೆ

catch
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ನೆಲಮಂಗಲ ತಾಲೂಕು ಕಂಬಾಳುಗೊಲ್ಲರಹಟ್ಟಿ ಭಾಗದಲ್ಲಿ ಅರಣ್ಯ ಇಲಾಖೆಯ 9 ದಿನಗಳ ಸತತ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.

ನ.24 ರ ಸಂಜೆ ವೇಳೆ ಗ್ರಾಮದಂಚಿನ ಅರಣ್ಯ ಪ್ರದೇಶದಲ್ಲಿ ಕರಿಯಮ್ಮನ ಮೇಲೆ ದಾಳಿ ನಡೆಸಿದ್ದ 100 ಮೀಟರ್ ವ್ಯಾಪ್ತಿಯಲ್ಲೇ ಚಿರತೆ ಕಾಣಿಸಿಕೊಂಡಿತ್ತು, ಇಲಾಖೆ ಅಳವಡಿಸಿದ್ದ ಸಿಸಿ ಕ್ಯಾಮರಾಗಳಲ್ಲಿ ಚಿರತೆ ಚಲನವಲನ ಸೆರೆಯಾಗಿತ್ತು. 25 ರ ಮುಂಜಾನೆ ಸಮಯದಲ್ಲಿ ಬೋನಿನಲ್ಲಿ ಸಿಕ್ಕಿಹಾಕಿಕೊಂಡಿದೆ. ತುಮಕೂರಿನಿಂದ ತರಿಸಿದ್ದ ವಿಶೇಷ ಬೋನು ಸೇರಿ ಅರಣ್ಯ ವ್ಯಾಪ್ತಿಯ ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ 9 ಬೋನುಗಳನ್ನು ಅಳವಡಿಸಿದ್ದ ಸಿಬ್ಬಂದಿ ಹಗಲು ರಾತ್ರಿ ಕಾರ್ಯಾಚರಣೆ ನಡೆಸಿತ್ತು. ವಿಶೇಷವೆಂದರೆ ತುಮಕೂರಿನಿಂದ ತರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.

ಅದೇ ಚಿರತೆಯೇ? ನ.18ರಂದು ಕಂಬಾಳುಗೊಲ್ಲರಹಟ್ಟಿ ಗ್ರಾಮದ ಕರಿಯಮ್ಮ ಜಮೀನಿನಲ್ಲಿ ಹುಲ್ಲು ಕುಯ್ಯುವ ವೇಳೆ ಚಿರತೆ ದಾಳಿ ನಡೆಸಿತ್ತು. ಸುಮಾರು 200 ಮೀಟರ್ ದೂರಕ್ಕೆ ಎಳೆದೊಯ್ದು ಕರಿಯಮ್ಮನ ತಲೆಯನ್ನು ಭಕ್ಷಣೆ ಮಾಡಿತ್ತು. ಈ ಸುದ್ದಿಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ವಿಷಯ ತಿಳಿದ ಕೂಡಲೇ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಕಾರ್ಯಾಚರಣೆ ರೂಪಿಸಿದ್ದರು. ಇದೀಗ ಚಿರತೆ ಏನೋ ಸೆರೆಯಾಗಿದೆ, ಆದರೆ ಇದು ಕರಿಯಮ್ಮನ ಮೇಲೆ ದಾಳಿ ನಡೆಸಿದ ಚಿರತೆಯೇ ಅಥವಾ ಬೇರೆಯದೆ ಎಂಬುದು ಖಚಿತವಾಗಿಲ್ಲ. ಕರಿಯಮ್ಮನ ಮರಣೋತ್ತರ ಪರೀಕ್ಷೆ ವರದಿ ಇನ್ನು ಇಲಾಖೆಗೆ ತಲುಪಿಲ್ಲ ಎನ್ನಲಾಗಿದ್ದು, ವರದಿ ಬಳಿಕ ಸೆರೆಯಾಗಿರುವ ಚಿರತೆ ಕರಿಯಮ್ಮನ ಕೊಂದ ಚಿರತೆಯೇ ಅಲ್ಲವೇ ಎಂಬುದು ಖಚಿತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬನ್ನೇರುಘಟ್ಟದಲ್ಲಿ ಚಿಕಿತ್ಸೆ: ಸೆರೆಯಾಗಿರುವ ಸುಮಾರು 7ವರ್ಷ ಪ್ರಾಯದ ಗಂಡು ಚಿರತೆಗೆ ಮುಖ ಸೇರಿ ಕಾಲುಗಳಿಗೆ ಸಣ್ಣಪುಟ್ಟ ಗಾಯವಾಗಿದೆ, ಬೋನಿಗೆ ಸಿಕ್ಕಿಬಿದ್ದ ವೇಳೆ ಹೊರಬರಲು ಪರದಾಡಿದ್ದರಿಂದ ಗಾಯಗೊಂಡಿದೆ ಎನ್ನಲಾಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನದಕ್ಕೆ ಚಿರತೆಯನ್ನು ರವಾನಿಸಲಾಗಿದೆ. ಚಿರತೆಗೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ದೂರವಾಗದ ಆತಂಕ: ಕಳೆದೊಂದು ವಾರದಿಂದ ಕಂಬಾಳುಗೊಲ್ಲರಹಟ್ಟಿ ಸೇರಿ ಸುತ್ತಮುತ್ತಲ ಗ್ರಾಮಸ್ಥರು ಆತಂಕದಲ್ಲೇ ದಿನದೂಡುತ್ತಿದ್ದರು. ಸಂಜೆ ಬಳಿಕ ಹೊಲಗದ್ದೆಗಳ ಕಡೆ ಹೋಗಿಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಚಿರತೆ ಸೆರೆಯಾದ ಬಳಿಕ ಗ್ರಾಮಸ್ಥರು ಸ್ವಲ್ಪಮಟ್ಟದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಸೆರೆಯಾಗಿರುವ ಚಿರತೆ ಕರಿಯಮ್ಮನ ಕೊಂದ ಚಿರತೆಯೇ ಅಲ್ಲವೇ ಎಂಬ ಗೊಂದಲವಿದೆ. ಒಮ್ಮೆ ಮನುಷ್ಯನ ರಕ್ತದ ರುಚಿಕಂಡಿರುವ ಚಿರತೆ ಮತ್ತೊಮ್ಮೆ ಮನುಷ್ಯರ ಮೇಲೆ ದಾಳಿ ನಡೆಸಬಹುದು ಎಂಬ ಆತಂಕ ಮನೆ ಮಾಡಿದೆ. ಅಲ್ಲದೆ ಈ ಭಾಗದಲ್ಲಿ ಮತ್ತಷ್ಟು ಚಿರತೆಗಳಿರುವ ಬಗ್ಗೆ ಅರಣ್ಯ ಇಲಾಖೆ ತಿಳಿಸಿರುವುದರಿಂದ ಗ್ರಾಮದ ಜನರು ಆತಂಕದಲ್ಲೇ ದಿನದೂಡುವಂತಾಗಿದೆ. ಕರಿಯಮ್ಮ ಅವರನ್ನು ಕೊಂದ ಅಣತಿ ದೂರದಲ್ಲೆ ಚಿರತೆ ಸುತ್ತಾಡುತ್ತಿದ್ದ ದೃಶ್ಯ ಕಂಡುಬಂದಿರುವುದರಿಂದ ಗ್ರಾಮಸ್ಥರ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಕಂಬಾಳುಗೊಲ್ಲರಹಟ್ಟಿಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ 9 ಬೋನುಗಳನ್ನು ಅಳವಡಿಸಿ ನಿರಂತರವಾಗಿ ಕಾರ್ಯಾಚರಣೆ ರೂಪಿಸಲಾಗಿತ್ತು. ಇದೀಗ ಗಂಡು ಚಿರತೆಯೊಂದು ಸೆರೆಯಾಗಿದೆ. ಅದನ್ನು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ರವಾನಿಸಲಾಗಿದೆ, ಈ ಭಾಗದಲ್ಲಿ ಮತ್ತಷ್ಟು ಚಿರತೆಗಳಿರುವ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ.

ಸರಿನಾ ಸಿಕ್ಕಲಿಗಾರ್, ಉಪ ಅರಣ್ಯ ಸಂರಕ್ಷಾಧಿಕಾರಿ ಬೆಂ.ಗ್ರಾಮಾಂತರ

ಪ್ರತಿ ದಿನ ಗ್ರಾಮದ ಅಕ್ಕ ಪಕ್ಕದಲ್ಲೇ ಪ್ರತ್ಯಕ್ಷವಾಗುತ್ತಿದ್ದ ಚಿರತೆ ಯಾವಾಗ ಜನರ ಮೇಲೆ ದಾಳಿ ಮಾಡುತ್ತೋ ಅನ್ನೋ ಭಯವಿತ್ತು. ಪ್ರತಿ ದಿನ ಇದೇ ಮಾರ್ಗದಲ್ಲಿ ಶಾಲಾ ಕಾಲೇಜುಗಳಿಗೆ ಹೋಗಿಬರುವ ನಾವುಗಳು ಭಯದಿಂದಲೇ ಓಡಾಡಬೇಕಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸತತ ಕಾರ್ಯಾಚರಣೆಯಿಂದ ಚಿರತೆಯನ್ನು ಸೆರೆ ಹಿಡಿದಿರುವುದರಿಂದ ಸ್ವಲ್ಪ ಧೈರ್ಯ ಬಂದಂತಾಗಿದೆ. ಆದರೆ ಈ ಭಾಗದಲ್ಲಿ ಮತ್ತಷ್ಟು ಚಿರತೆ, ಕರಡಿಗಳಿರುವ ಬಗ್ಗೆ ಹೇಳುವುದರಿಂದ ಭಯದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.

ಎಸ್.ರಮ್ಯಾ, ಕಾಲೇಜು ವಿದ್ಯಾರ್ಥಿನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net