

ಹೊಸಪೇಟೆ: ಚಿರತೆ ಸೆರೆಹಿಡಿದು ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ರಾಯರ ಕೆರೆ, ಜಂಬುನಾಥ ಹಳ್ಳಿ, ರಾಜಾಪುರ ರೈತರು ಮಂಗಳವಾರ ಆರ್‌ಎಫ್‌ಒ ಭರತ್‌ಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಚಿರತೆ ದಾಳಿಗೆ 32 ಕುರಿ ಸಾವು
ತಾಲೂಕಿನ ರಾಯರ ಕೆರೆ, ರಾಜಾಪುರ, ಜಂಬುನಾಥಹಳ್ಳಿ ಭಾಗದ ರೈತರ ಹೊಲಗಳಲ್ಲಿ ಕಾಡುಪ್ರಾಣಿಗಳ ಕಾಟ ನಿರಂತರವಾಗಿದೆ. ಈ ಹಿಂದೆ ಕಬ್ಬಿನ ಗದ್ದೆಯಲ್ಲಿ ಚಿರತೆ 4 ರಿಂದ 5 ಮರಿಗಳನ್ನು ಬಿಟ್ಟು ಹೋದ ಸಂದರ್ಭದಲ್ಲಿ ಇಲ್ಲಿನ ರೈತರು ಪ್ರಾಣಿಗಳಿಗೆ ತೊಂದರೆಮಾಡದೆ ಇಲಾಖೆ ಗಮನಕ್ಕೆ ತಂದು ರಕ್ಷಣೆ ಮಾಡಿದ್ದಾರೆ.
ಅದರೆ, ಇತ್ತೀಚಿನ ದಿನಗಳಲ್ಲಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಹೊತ್ತೊಯ್ದಿವೆ. ಆದ್ದರಿಂದ ರೈತರು ಜಮೀನುಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಕೂಡಲೇ ಚಿರತೆ ಹಿಡಿದು ಮೃಗಾಲಯಕ್ಕೆ ಕಳುಹಿಸಬೇಕು. ಇಲ್ಲದಿದ್ದರೆ ಎಕರೆಗೆ 50 ಸಾವಿರ ನಷ್ಟ ಪರಿಹಾರ ಕೊಡಬೇಕು. ಸಾಗುವಳಿ ಮಾಡುವ ರೈತರಿಗೆ ಪಟ್ಟಾ ನೀಡಲು ಕಂದಾಯ ಇಲಾಖೆಗೆ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರಾಂತ ರೈತ ಸಂಘದ ಕಾರ್ಯದರ್ಶಿ ಯಲ್ಲಾಲಿಂಗ, ರೈತರಾದ ವೆಂಕೊಬ ಪೂಜಾರ್, ಕಟ್ಟಗಿ ಕರಿ ಹನುಮ, ಮರಡಿ ಬಸವ, ಪೂಜಾರಿ ದುರುಗಪ್ಪ, ಕಲ್ಲಗುಡಿ ಮಂಜುನಾಥ, ಕನಕಪ್ಪ, ಜಂಬಯ್ಯ ಇತರರಿದ್ದರು.