ಯುಟಿಪಿ ಕಾಲುವೆಯಲ್ಲಿ ಚಿರತೆ ಶವ ಪತ್ತೆ: ವಿಷ ಉಣಿಸಿ ಕೊಂದಿರುವ ಶಂಕೆ

Cheeta Dead body found in ranebennur
Published on

ರಾಣೆಬೆನ್ನೂರ: ತುಂಗಾ ಮೇಲ್ದಂಡೆ ಕಾಲುವೆ (ಯುಟಿಪಿ)ಯಲ್ಲಿ ಮಂಗಳವಾರ ಬೆಳಗ್ಗೆ ಚಿರತೆಯೊಂದರ ಶವ ಪತ್ತೆಯಾಗಿದ್ದು, ಅದು ಸಹಜ ಸಾವೋ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ.

5 ವರ್ಷದ ಗಂಡು ಚಿರತೆಯ ಶವ ಕಾಲುವೆಯ ನಿಂತ ಕೊಳಚೆ ನೀರಿನಲ್ಲಿ ಪತ್ತೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಈ ಚಿರತೆಯು ದೇವರಗುಡ್ಡ, ಯಲ್ಲಾಪುರ ಸೇರಿ ಸುತ್ತಲಿನ ಗ್ರಾಮಗಳ ರೈತರಿಗೆ ಕಾಣಿಸಿಕೊಂಡಿತ್ತು. ಗ್ರಾಮೀಣ ಭಾಗದಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಇದೀಗ ಚಿರತೆ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಚಿರತೆಯನ್ನು ಕೊಲೆ ಮಾಡಿದ್ದಾರೋ? ಅಥವಾ ವಿಷವಿಟ್ಟು ಕೊಂದಿದ್ದಾರೋ? ಎನ್ನುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಶು ಆಸ್ಪತ್ರೆ ವೈದ್ಯರು ಚಿರತೆಯ ಶವ ಪರೀಕ್ಷೆ ನಡೆಸಿದ್ದಾರೆ.

ಚಿರತೆ ಮೈ ಮೇಲೆ ಹೊಡೆದಿರುವ ಅಥವಾ ಹಲ್ಲೆ ಮಾಡಿರುವ ಗುರುತುಗಳು ಪತ್ತೆಯಾಗಿಲ್ಲ. ಆದರೂ ಚಿರತೆಯ ಮೃತದೇಹದ ಆಯ್ದ ತುಂಡುಗಳನ್ನು ಹೈದರಾಬಾದ್ ಹಾಗೂ ಡೆಹ್ರಾಡೂನ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹಾವೇರಿ ಡಿಎಫ್​ಒ ಅಬ್ದುಲ್ ಅಜೀಜ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net