ವಿಐಎಸ್‌ಎಲ್‌ನಲ್ಲಿ ಚಿರತೆ ಸೆರೆಗೆ ಬೋನು

26bdvt2
ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಆವರಣದಲ್ಲಿ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನು ಇರಿಸಿರುವುದು.
Published on

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಆವರಣದಲ್ಲಿ ಮಂಗಳವಾರ ಕಾಣಿಸಿಕೊಂಡ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದು ಸೆರೆಗಾಗಿ ಬೋನು ಇಡಲಾಗಿದೆ. ಮಂಗಳವಾರ ರಾತ್ರಿ ಬೋನಿನೊಂದಿಗೆ ಆಗಮಿಸಿದ ಅಧಿಕಾರಿಗಳು ಶ್ವಾನವೊಂದನ್ನು ಸಹ ಜತೆಯಲ್ಲಿ ತಂದಿದ್ದಾರೆ.
ಚಿರತೆ ಓಡಾಡುತ್ತಿರುವ ಬಗ್ಗೆ ವಿಐಎಸ್‌ಎಲ್ ಕಾರ್ಖಾನೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳಾದ ಕೆ.ಆರ್.ರಾಕೇಶ್, ಬಿ.ಆರ್.ದಿನೇಶ್‌ಕುಮಾರ್ ಸೇರಿದಂತೆ ಕಾರ್ಖಾನೆ ಭದ್ರತಾ ಸಿಬ್ಬಂದಿ ವ್ಯವಸ್ಥಿತವಾಗಿ ಮಂಗಳವಾರ ರಾತ್ರಿಯೇ ಬೋನು ಇರಿಸಿದ್ದು ಬುಧವಾರ ಬೆಳಗ್ಗೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದರು. ಕಾರ್ಯಾಚರಣೆ ಬುಧವಾರವೂ ಸಹ ಮುಂದುವರಿದಿದೆ.
ವಿಐಎಸ್‌ಎಲ್ ಕಾರ್ಖಾನೆ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಇದು ಮೂರನೇ ಬಾರಿಯಾಗಿದೆ. ಈ ಮೊದಲು ಕಾಣಿಸಿಕೊಂಡ ಚಿರತೆಗಳನ್ನು ಕಾರ್ಖಾನೆ ವ್ಯಾಪ್ತಿಯ ಹುಡ್ಕೋ ಕಾಲನಿ, ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ಇರುವ ವಸತಿ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಹಿಡಿದಿದ್ದರು. ಇದೀಗ ಮತ್ತೊಮ್ಮೆ ಕಾಣಿಸಿಕೊಂಡಿರುವುದು ಕಾರ್ಖಾನೆ ಕಾರ್ಮಿಕರಿಗಷ್ಟೆ ಅಲ್ಲದೆ ಸ್ಥಳಿಯ ನಾಗರಿಕರಲ್ಲಿಯೂ ಆತಂಕ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net