

ವಿಜಯವಾಣಿ ಸುದ್ದಿಜಾಲ ಆನೇಕಲ್
ಬನ್ನೇರುಘಟ್ಟ ಸಮೀಪದ ಕುಲುಮೆಪಾಳ್ಯದಲ್ಲಿ ಚಿರತೆ ನಾಯಿ ಮೇಲೆ ದಾಳಿ ಮಾಡಿ ಎಳೆದೊಯ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದ ಅಂಗಡಿಯೊಂದರ ಸಿಸಿ ಕ್ಯಾಮರಾದಲ್ಲಿ ಚಿರತೆ ನಾಯಿ ಹಿಡಿಯಲು ಯತ್ನಿಸಿರುವ ದೃಶ್ಯ ಸೆರೆ ಆಗಿದ್ದು, ಗ್ರಾಮಸ್ಥರು ಸಂಜೆ ವೇಳೆ ಮನೆಯಿಂದ ಹೊರಬರಲು ಹಿಂಜರಿಯುವಂತಾಗಿದೆ.
ಎರಡು ತಿಂಗಳ ಅವಧಿಯಲ್ಲಿ ಐದಾರು ಶ್ವಾನಗಳು ಕಾಣೆಯಾಗಿದ್ದವು. ಚಿರತೆಯೇ ಹೊತ್ಯೊಯ್ದಿರುವ ಬಗ್ಗೆ ಗ್ರಾಮಸ್ಥರು ಶಂಕಿಸಿದ್ದರಾದರೂ ಜಾಡು ದೊರಕಿರಲಿಲ್ಲ.
ಮಂಗಳವಾರ ರಾತ್ರಿ ನಾಯಿಗಳು ಜೋರಾಗಿ ಬೊಗಳುತ್ತಿದ್ದ ಹಿನ್ನೆಲೆಯಲ್ಲಿ ಕ್ಯಾಮರಾ ಪರಿಶೀಲಿಸಿದಾಗ ಚಿರತೆ ಬಂದಿದ್ದು ಕಂಡು ಬಂತು. ಈ ಬಗ್ಗೆ ಮುಂಜಾನೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು ಎಂದು ಅಂಗಡಿ ಮಾಲೀಕ ಮಂಜುನಾಥ್ ತಿಳಿಸಿದರು.
ಆನೇಕಲ್ ಪ್ರಾದೇಶಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಮಾತನಾಡಿ, ಬನ್ನೇರುಘಟ್ಟ ಅರಣ್ಯ ಪ್ರದೇಶ ಸಮೀಪದ ಕುಲುಮೆ ಪಾಳ್ಯದಲ್ಲಿ ಚಿರತೆ ಕಂಡುಬಂದಿದೆ. ಹಸು, ಕುರಿ, ಮೇಕೆ ಮೇಲೆ ದಾಳಿ ಮಾಡಿರುವ ದೂರು ಬಂದಿಲ್ಲ. ಚಿರತೆ ಮತ್ತೆ ಕಾಣಿಸಿಕೊಂಡರೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದು ಬೋನು ಇಟ್ಟು ಸೆರೆಹಿಡಿಯಲಾಗುವುದು ಎಂದರು.