ಮಹಿಳೆಯರಿಬ್ಬರ ಮೇಲೆ ಚಿರತೆ ದಾಳಿ

31 Dwd 2
Published on



ಧಾರವಾಡ: ಇಬ್ಬರು ಮಹಿಳೆಯರ ಮೇಲೆ ಚಿರತೆ ದಾಳಿ ನಡೆಸಿದ ಪ್ರತ್ಯೇಕ ಘಟನೆ ತಾಲೂಕಿನ ಗೋವನಕೊಪ್ಪ ಗ್ರಾಮದ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಗೋವನಕೊಪ್ಪ ಗ್ರಾಮದ ಬಸವಣ್ಣೆವ್ವ ಕುಲಕರ್ಣಿ, ಕವಲಗೇರಿ ಗ್ರಾಮದ ಮಂಜುಳಾ ತೋಟಗೇರ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ. ಈ ಇಬ್ಬರೂ ಮಹಿಳೆಯರು ಜಮೀನಿನಲ್ಲಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಚಿರತೆ ದಾಳಿ ಮಾಡಿದೆ ಎನ್ನಲಾಗಿದೆ. ಇಬ್ಬರೂ ಮಹಿಳೆಯರು ಕಿರುಚಿಕೊಳ್ಳುತ್ತಲೇ ದಿಟ್ಟತನದಿಂದ ಆ ಪ್ರಾಣಿಯ ಕೈಯಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕ ಅಮೃತ ಭೇಟಿ: ಗಾಯಾಳು ಮಹಿಳೆಯರು ದಾಖಲಾಗಿರುವ ಜಿಲ್ಲಾ ಆಸ್ಪತ್ರೆಗೆ ಶಾಸಕ ಅಮೃತ ದೇಸಾಯಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಅಗತ್ಯ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಡಿಸಿಎಫ್ ಯಶ್​ಪಾಲ ಕ್ಷೀರಸಾಗರ ಸಹ ಉಪಸ್ಥಿತರಿದ್ದು, ಗಾಯಾಳುಗಳಿಂದ ಘಟನೆಯ ಮಾಹಿತಿ ಪಡೆದುಕೊಂಡರು.
ಚಿರತೆ ಪತ್ತೆಗೆ ದೌಡು: ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿ- ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದ್ದು, ದಾಳಿ ಮಾಡಿರುವುದು ಚಿರತೆಯೋ ಅಥವಾ ಇನ್ನಾವುದೋ ಕಾಡು ಪ್ರಾಣಿಯೋ ಎಂಬುದರ ಬಗ್ಗೆ ಮತ್ತಷ್ಟು ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲು ತೀರ್ವನಿಸಿದ್ದಾರೆ. ಎರಡೂವರೆ ತಿಂಗಳ ಹಿಂದೆ ಹುಬ್ಬಳ್ಳಿಯ ನೃಪತುಂಗ ಬೆಟ್ಟ, ಧಾರವಾಡ ತಾಲೂಕಿನ ಗೋವನಕೊಪ್ಪ ಸುತ್ತಮುತ್ತ ಚಿರತೆ ಕಾಣಿಸಿಕೊಂಡು ತೀವ್ರ ಆತಂಕ ಉಂಟುಮಾಡಿತ್ತು. ಅರಣ್ಯ ಇಲಾಖೆಯವರು ಹಲವು ದಿನಗಳ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದು, ಬೇರೆ ಕಡೆಯ ಅರಣ್ಯಕ್ಕೆ ಕೊಂಡೊಯ್ದು ಬಿಟ್ಟಿದ್ದರು. ಈಗ ಮತ್ತೊಮ್ಮೆ ಗೋವನಕೊಪ್ಪದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸುತ್ತಮುತ್ತಲಿನ ಪ್ರದೇಶದ ಜನರಲ್ಲೂ ಆತಂಕ ಮೂಡಿಸಿದೆ.

ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ: ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದ ಬಳಿ ಇಬ್ಬರು ಮಹಿಳೆಯರ ಮೇಲೆ ಕಾಡುಪ್ರಾಣಿ ದಾಳಿ ಮಾಡಿದ್ದು, ಅದು ಚಿರತೆಯೋ, ತೋಳವೋ ಅಥವಾ ಇತರ ಕಾಡುಪ್ರಾಣಿಯೋ ಎಂಬುದು ಕಾರ್ಯಾಚರಣೆ ನಂತರ ಖಚಿತವಾಗಲಿದೆ ಎಂದು ಡಿಸಿಎಫ್ ಯಶ್​ಪಾಲ ಕ್ಷೀರಸಾಗರ ತಿಳಿಸಿದ್ದಾರೆ. ಗ್ರಾಮದ ಸುತ್ತ ಅಗತ್ಯ ಕ್ರಮ ವಹಿಸಲಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಯ ತಂಡಗಳು ಕಾರ್ಯಾಚರಣೆ ಕೈಗೊಳ್ಳಲಿವೆ. ಕೆಲವರು ಚಿರತೆ ದಾಳಿ ಮಾಡಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸಾರ್ವಜನಿಕರು ಇದನ್ನು ಏಕಾಏಕಿ ನಂಬಿ ಆತಂಕಗೊಳ್ಳಬಾರದು. ಹಾಗೆಯೆ, ರಾತ್ರಿ ಅನವಶ್ಯಕವಾಗಿ ಹೊರಗಡೆ ಒಬ್ಬೊಬ್ಬರೇ ತಿರುಗಾಡಬಾರದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net