

ಹನೂರು : ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ತೂರು ಗ್ರಾಮದಲ್ಲಿ ಗುರುವಾರ ಹಾಡಹಗಲೇ ಚಿರತೆಯೊಂದು ಮೇಕೆ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದು, ಕುರಿಗಾಯಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮದ ವೆಂಕಟರಾಜು ಅವರು ಬೆಳಗ್ಗೆ 11.30ರಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಚಿರತೆ ಮೇಕೆ ಹಿಂಡಿನ ಮೇಲೆ ದಾಳಿ ನಡೆಸಿದೆ. ಇದರಿಂದ ಗಾಬರಿಯಾದ ವೆಂಕಟರಾಜು ಓಡಿ ಹೋಗಿ ಸಮೀಪದ ಬಂಡೆಯ ಮೇಲೇರಿ ಕುಳಿತು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚೀರಾಟದ ಶಬ್ದ ಕೇಳಿ ಸಮೀಪದಲ್ಲಿದ್ದ ಸ್ಥಳೀಯರು ಸ್ಥಳಕ್ಕಾಗಮಿಸಿ ಚಿರತೆಯನ್ನು ಕಾಡಿನತ್ತ ಓಡಿಸಿದ್ದಾರೆ. ಬಳಿಕ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಚಿರತೆ ಒಂದು ಮೇಕೆ ಕತ್ತಿನ ಭಾಗ ಕಚ್ಚಿ ಗಾಯಗೊಳಿಸಿದೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಪರಿಶೀಲಿಸಿದರು. ಈ ವೇಳೆ ಗಾಯಗೊಂಡಿರುವ ಮೇಕೆಗೆ ಅಗತ್ಯ ಚಿಕಿತ್ಸೆ ಹಾಗೂ ಚಿರತೆ ಹಾವಳಿಗೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಒತ್ತಾಯಿಸಿದರು.