

ಹೊಳೆನರಸೀಪುರ: ತಾಲೂಕಿನ ಜಾಠದಾಳ್ ಕ್ರಾಸ್ ಮತ್ತು ಹೂವಿನಹಳ್ಳಿ ಗ್ರಾಮಗಳ ನಡುವಿನ ಕಬ್ಬಿನಗದ್ದೆ ಬಳಿ ಕೆಲಸ ಮಾಡುತ್ತಿದ್ದ ಕೃಷಿ ಕಾರ್ಮಿಕನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ.
ಸುಲ್ತಾನ್ ಖಾನ್ (38) ಗಾಯಗೊಂಡವರು. ಬುಧವಾರ ಬೆಳಗ್ಗೆ 11 ಗಂಟೆಯಲ್ಲಿ ದಾಳಿ ನಡೆಸಿದ್ದು, ಕಾರ್ಮಿಕನ ಕೈ, ಮುಖ, ಬೆನ್ನು ಎದೆಭಾಗಗಳಿಗೆ ಗಾಯವಾಗಿದೆ. ಚಿರತೆಯೊಂದಿಗೆ ಹೋರಾಡುತ್ತಾ ಕಿರುಚಾಡಿದ್ದರಿಂದ ಅಕ್ಕಪಕ್ಕದ ಜನರು ಕೂಗಿಕೊಂಡಿದ್ದರಿಂದ ಗಾಬರಿಯಾಗಿ ಚಿರತೆ ಪರಾರಿಯಾಗಿದೆ. ಗಾಯಾಳು ಸುಲ್ತಾನ್‌ಖಾನ್ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಗಾಯಾಳುಗೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗುವುದು. ವೈದ್ಯಕೀಯ ವೆಚ್ಚವನ್ನು ಇಲಾಖೆಯಿಂದ ಭರಿಸಲಾಗುವುದು ಎಂದು ಡಿಆರ್‌ಎಫ್ ಕೆ.ಎಸ್.ನವೀನಕುಮಾರ್ ತಿಳಿಸಿದ್ದಾರೆ. ಚಿರತೆಯನ್ನು ಸೆರೆಹಿಡಿಯಲು ಬೋನು ಇರಿಸಲಾಗುವುದು ಎಂದು ಆರ್‌ಎಫ್‌ಒ ದಿಲೀಪ್ ಕುಮಾರ್ ತಿಳಿಸಿದ್ದಾರೆ.