

ಗಂಗೊಳ್ಳಿ: ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಕನ್ನಡಕುದ್ರು ಎಂಬಲ್ಲಿ ಚಿರತೆ ಓಡಾಟ ಕಂಡುಬಂದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸೌಪರ್ಣಿಕಾ ನದಿಯಿಂದ ಸುತ್ತುವರಿದಿರುವ ಕನ್ನಡಕುದ್ರು ಪ್ರದೇಶಕ್ಕೆ ಗಂಗೊಳ್ಳಿ ಗ್ರಾಮದ ಮೀನುಗಾರರು ಮೀನು ಹಿಡಿಯಲು ತೆರಳಿದ್ದು, ಈ ವೇಳೆ ಚಿರತೆ ಮೀನುಗಾರರನ್ನು ಬೆನ್ನಟ್ಟಿದೆ. ಬಳಿಕ ಸಂತ ಅಂತೋನಿ ಚರ್ಚ್ ವಠಾರದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಸ್ಥಳೀಯರು ಈ ಕುರಿತು ಅರಣ್ಯ ಇಲಾಖೆಗೆ ಮನವಿ ಮಾಡಿದ್ದು, ಶೀಘ್ರವೇ ಚಿರತೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.