

ಹುಬ್ಬಳ್ಳಿ : ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಹಾಗೂ ಮತ್ತಿತರ ಉಪಕರಣಗಳನ್ನು ನೀಡುವುದಕ್ಕಾಗಿ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಲಿಯೊ ಕ್ಲಬ್ ವತಿಯಿಂದ ನಗರದಲ್ಲಿ ಜ. 19ರಂದು ಲಿಯೊ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಲಿಯೊ ಕ್ಲಬ್ ಚೇರ್ಪರ್ಸನ್ ಆರ್ಯನ್ ಹಿರೇಗೌಡ, ಕ್ರಿಕೆಟ್ ಪಂದ್ಯಾವಳಿಯ 4ನೇ ಆವೃತ್ತಿ ಇದಾಗಿದೆ. ಕೇಶ್ವಾಪುರದ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಗೆ ಈಗಾಗಲೇ 22 ತಂಡಗಳು ಹೆಸರು ನೋಂದಾಯಿಸಿವೆ. ಟೆನಿಸ್ಬಾಲ್ ಕ್ರಿಕೆಟ್ನ ಈ ಪಂದ್ಯಾವಳಿ 6 ಓವರ್ಗಳದ್ದಾಗಿದ್ದು, ಪ್ರತಿ ತಂಡದಲ್ಲಿ 7 ಆಟಗಾರರು ಆಡುವರು ಎಂದು ತಿಳಿಸಿದರು.
ದಾವಣಗೆರೆ, ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ತಂಡಗಳು ಹೆಸರು ನೋಂದಾಯಿಸಿವೆ. ಇದುವರೆಗೆ ಸಂಗ್ರಹಿಸಿದ್ದ ದೇಣಿಗೆಯಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಮಾತ್ರೆ, ಔಷಧಿ, ಕ್ಯಾನ್ಸರ್ ರೋಗಿಗಳಿಗೆ ಉಚಿತ ಕಿಮೊಥೆರಪಿ ಚಿಕಿತ್ಸೆ, ಉಚಿತ ನೇತ್ರ ತಪಾಸಣೆ ಹಾಗೂ ಮತ್ತಿತರ ಕಾರ್ಯಗಳನ್ನು ಮಾಡಲಾಗಿದೆ. ಈ ವರ್ಷ ಮಹಾವೀರ ಲಿಂಬ್ ಸೆಂಟರ್ ಸಹಯೋಗದೊಂದಿಗೆ ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಶಿಬಿರ ಹಾಗೂ ಮತ್ತಿತರ ಸಲಕರಣೆ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಹೇಂದ್ರ ಸಿಂಘಿ ಹಾಗೂ ಮನೋಜ ಮಾಣಿಕ್ ಅವರು ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಹಾಗೂ ಟೀ ಶರ್ಟ್ ಅನಾವರಣಗೊಳಿಸಿದರು.
ಲಿಯೋ ಕ್ಲಬ್ನ ಚಿರಾಗ ಕಲಾಲ, ಪಾರ್ಥ, ಸ್ಮೀತಾ ಕ್ಯಾರ್ಸ್ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.