

ಮೈಸೂರು: ರಷ್ಯಾ ಕ್ರಾಂತಿಗೆ ಕಾರಣವಾಗಿದ್ದ ಲೆನಿನ್ ಹೋರಾಟ ಕೇವಲ ಒಂದು ದೇಶಕ್ಕೆ ಸೀಮಿತಗೊಳ್ಳದೆ ಭಾರತ ಸೇರಿದಂತೆ ಅನೇಕ ದೇಶಗಳ ಹೋರಾಟಕ್ಕೆ ಪ್ರೇರಣೆ ನೀಡಿತ್ತು ಎಂದು ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಎನ್.ವಿಜಯಕುಮಾರ್ ಅಭಿಪ್ರಾಯಪಟ್ಟರು.
ಕಾಮ್ರೇಡ್ ವಿ.ಐ.ಲೆನಿನ್ ಮರಣ ಶತಾಬ್ದಿ ಅಂಗವಾಗಿ ಸಿಪಿಐ, ಸಿಪಿಐಎಂ, ಸಿಪಿಐಎಂಎಲ್, ಎಸ್‌ಯುಸಿಐಸಿ ಪಕ್ಷಗಳ ಜಿಲ್ಲಾ ಸಮಿತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಮಿಕ ವರ್ಗದ ಪ್ರಭುತ್ವ ಮತ್ತು ಭಾರತದ ರಾಜಕೀಯ, ಸಾಂಸ್ಕೃತಿಕ ವಲಯದ ಮೇಲೆ ಲೆನಿನ್ ಪ್ರಭಾವ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಇತಿಹಾಸದಲ್ಲಿ ವಿಮೋಚನಾ ಹೋರಾಟಗಳಿಗೆ ಲೆನಿನ್ ನಡೆಸಿದ ರಷ್ಯಾ ಕ್ರಾಂತಿ ಪ್ರೇರಣೆಯಾಗಿತ್ತು. ಭಾರತದ ಸ್ವಾತಂತ್ರ್ಯ ಚಳವಳಿಯೂ ಸೇರಿದಂತೆ ಜಗತ್ತಿನ ಬೇರೆ ದೇಶಗಳಲ್ಲಿ ನಡೆಯುತ್ತಿದ್ದ ಹೋರಾಟಗಳು ರಾಜಕೀಯ ಸ್ವಾತಂತ್ರ್ಯ ಪಡೆಯುವ ಸೀಮಿತ ವ್ಯಾಪ್ತಿ ಹೊಂದಿದ್ದವು. ರಷ್ಯಾ ಕ್ರಾಂತಿಯ ನಂತರ ಜಗತ್ತಿನ ರಾಷ್ಟ್ರಗಳು ರಾಜಕೀಯ ಸ್ವಾತಂತ್ರ್ಯ ಪಡೆಯುವುದರ ಜತೆಗೆ ಆರ್ಥಿಕ ಮತ್ತು ಸಾಮಾಜಿಕ ಸಂಕೋಲೆಗಳಿಂದ ಬಿಡುಗಡೆ ಹೊಂದಲು ಹೋರಾಟ ಆರಂಭಿಸಿದವು ಎಂದರು.
ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಅವರ ಮೇಲೆಯೂ ಲೆನಿನ್ ಪ್ರಭಾವ ಬೀರಿದ್ದರು. ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ರಷ್ಯಾ ಕ್ರಾಂತಿ ಹೊಸ ಬದಲಾವಣೆಗೆ ಕಾರಣವಾಗಿತ್ತು. ನಮ್ಮ ದೇಶದಲ್ಲೂ ಪ್ರೇಮಚಂದ್, ರವೀಂದ್ರನಾಥ್ ಟ್ಯಾಗೋರ್, ಸತೀಶ್ಚಂದ್ರ ಚಟರ್ಜಿ, ಕನ್ನಡದಲ್ಲಿ ಕುವೆಂಪು, ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ, ನಿರಂಜನ ಇನ್ನೂ ಮುಂತಾದ ಸಾಹಿತಿಗಳ ಮೇಲೂ ಲೆನಿನ್ ಪ್ರಭಾವ ಇತ್ತು ಎಂದು ಹೇಳಿದರು.
ಲೆನಿನ್ ರಷ್ಯಾ ಕ್ರಾಂತಿಗೆ ಮಾತ್ರ ಸೀಮಿತವಾಗಿರಲಿಲ್ಲ. ಶ್ರಮಿಕ ವರ್ಗವನ್ನು ಕ್ರಾಂತಿಗೆ ಪ್ರೇರೇಪಿಸಿದ ಕುವೆಂಪು ಅವರ ಕಲ್ಕಿ ಪದ್ಯ ಮತ್ತು ಬೇಂದ್ರೆ ಅವರ ಕುರುಡು ಕಾಂಚಾಣ ಕುಣಿಯುತಿತ್ತು ಪದ್ಯಗಳ ಮೇಲೆ ರಷ್ಯಾ ಕ್ರಾಂತಿಯ ಪ್ರಭಾವವಿದೆ ಎಂದರು.
ಸಿಪಿಐ ಮುಖಂಡ ಎಚ್.ಆರ್.ಶೇಷಾದ್ರಿ ಮಾತನಾಡಿ, ಕಾರ್ಲ್‌ಮಾರ್ಕ್ಸ್ ಪ್ರತಿಪಾದಿಸಿದ ಸಮತಾವಾದ ಸಿದ್ಧಾಂತ ಪುಸ್ತಕದ ರೂಪದಲ್ಲಿಯೇ ಉಳಿದಿತ್ತು. ಈ ಸಮತಾವಾದ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಕೀರ್ತಿ ಲೆನಿನ್‌ಗೆ ಸಲ್ಲುತ್ತದೆ. ರಷ್ಯಾದಲ್ಲಿ ಅಸಂಘಟಿತವಾಗಿ ದುಡಿಯುತ್ತಿದ್ದ ಶ್ರಮಿಕ ವರ್ಗಗಳನ್ನು ಸಂಘಟನೆ ಮಾಡಿ, ಆಳುವ ವರ್ಗವಾಗಿ ಕೂರಿಸಿದ್ದು ಜಗತ್ತಿನ ಬಹುದೊಡ್ಡ ಕ್ರಾಂತಿಯಾಗಿದೆ ಎಂದು ಬಣ್ಣಿಸಿದರು.
ಸಿಪಿಐಎಂಎಲ್‌ನ ರಾಜ್ಯ ಸಮಿತಿ ಸದಸ್ಯರಾದ ಲೇಖಕ ನಾ.ದಿವಾಕರ್ ಮಾತನಾಡಿದರು. ಅಖಿಲ ಎಐಡಿವೈಒ ಸಂಘಟನೆ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಜಿ.ಶಶಿಕುಮಾರ್, ಸಿಪಿಐನ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ರಾಮಕೃಷ್ಣ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಸಿಪಿಐಎಂಎಲ್ನ ಜಿಲ್ಲಾ ಕಾರ್ಯದರ್ಶಿ ಚೌಡಳ್ಳಿ ಜವರಯ್ಯ, ಎಸ್‌ಯುಸಿಐಸಿ ಜಿಲ್ಲಾ ಕಾರ್ಯದರ್ಶಿ ಬಿ.ರವಿ ಇತರರು ಇದ್ದರು.