ಕೈಕೊಟ್ಟ ಮಳೆ, ಅನ್ನದಾತ ಕಂಗಾಲು

dj p pura baragala
Published on

ಭಾರತಿ ಒ.ಚಿತ್ತಯ್ಯ ಪರಶುರಾಮಪುರ
ಈ ಬಾರಿ ವರುಣನ ಅವಕೃಪೆಯಿಂದಾಗಿ ಅನ್ನದಾತ ಸಂಪೂರ್ಣ ಕಂಗಾಲಾಗಿದ್ದಾನೆ. ಕೈ ಕೊಟ್ಟ ಮಳೆಯಿಂದಾಗಿ ಭೂಮಿ ತಾಯಿ ನಂಬಿದ ರೈತರು ನಿರೀಕ್ಷಿತ ಬೆಳೆ ಬಾರದೆ ಅಕ್ಷರಶಃ ಬೀದಿಗೆ ಬಂದಿದ್ದಾರೆ.

ಪರಶುರಾಮಪುರ ಹೋಬಳಿಯಾದ್ಯಂತ ಮಳೆಯಾಶ್ರಿತ 20.600 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಅನಾವೃಷ್ಟಿಗೆ ತುತ್ತಾಗಿ ಸಂಪೂರ್ಣ ಒಣಗಿದೆ. ಬೆಳೆಗಾಗಿ ಹನಿ ನೀರಿಗೆ ಪರದಾಡುವಂತಹ ಸ್ಥಿತಿ ರೈತನದ್ದಾಗಿದೆ.

ಸಾಲ ಮಾಡಿ ಹಾಕಿದ ಬೆಳೆಯಂತೂ ಹೊಟ್ಟೆ-ಬಟ್ಟೆಗಾಗಲಿಲ್ಲ. ಕನಿಷ್ಟ ಒಣ ಮೇವು ತಿಂದು ಜಾನುವಾರುಗಳಾದರೂ ಜೀವ ಉಳಿಸಿಕೊಳ್ಳಲಿ ಎಂದು ಒಣಗಿದ ಬೆಳೆಯನ್ನು ಕಟಾವು ಮಾಡುವ ದೃಶ್ಯ ಸಾಮಾನ್ಯವಾಗಿದೆ.

ಚಳ್ಳಕೆರೆ ತಾಲೂಕಿನ 60 ಸಾವಿರ ಹೆಕ್ಟೇರ್ ಪೈಕಿ ಪರಶುರಾಮಪುರ ಹೋಬಳಿಯ 10 ಗ್ರಾಪಂ ವ್ಯಾಪ್ತಿಯ ರೈತರು ಶೇಂಗಾ ಬೆಳೆದಿದ್ದರು. ಇದೀಗ ಈ ಎಲ್ಲ ರೈತರು ಶೇಂಗಾ ಬಳ್ಳಿಯನ್ನು ಅರಗಿ ಮಾಡಿ ಸಂಗ್ರಹಿಸುತ್ತಿದ್ದಾರೆ.

ಪರಶುರಾಮಪುರ, ಸಿದ್ದೇಶ್ವರನದುರ್ಗ, ಟಿ.ಎನ್.ಕೋಟೆ, ದೊಡ್ಡಚೆಲ್ಲೂರು, ಬೆಳೆಗೆರೆ, ಪಗಡಲಬಂಡೆ, ಜಾಜೂರು, ಸಿ.ಎನ್.ಹಳ್ಳಿ, ಚೌಳೂರು ದೇವರಮರಿಕುಂಟೆ, ಸಿರಿವಾಳ ಓಬಳಾಪುರ ಸೇರಿ 52 ಹಳ್ಳಿಗಳಲ್ಲಿ ಶೇಂಗಾ ಬೆಳೆಯಲಾಗಿತ್ತು.

ಬೆಳೆ ಪರಿಹಾರಕ್ಕೆ ಪಟ್ಟು: ಚಳ್ಳಕೆರೆ ತಾಲೂಕಿನಲ್ಲಿ ಶೇಂಗಾ ಬೆಳೆ ನಷ್ಟಕ್ಕೆ ಒಳಗಾದ ಎಲ್ಲ ರೈತರಿಗೂ ವಿಮೆ ಮತ್ತು ಬೆಳೆನಷ್ಟ ಪರಿಹಾರ ಮಂಜೂರು ಮಾಡಬೇಕು ಎಂದು ಟಿ.ಎನ್.ಕೋಟೆ ಗ್ರಾಪಂ ಮಾಜಿ ಅಧ್ಯಕ್ಷ ಒ.ಬೈಲಪ್ಪ, ಮಾಜಿ ಸದಸ್ಯ ಆರ್.ಟಿ.ನಿಂಗಣ್ಣ, ಮುಖಂಡರಾದ ಜಯಣ್ಣ, ಗಣೇಶ, ತಿಪ್ಪೇಸ್ವಾಮಿ, ಗೋಸಿಕೆರೆ ನಾಗೇಂದ್ರಪ್ಪ, ತಿಮ್ಮಯ್ಯ, ಕೃಷ್ಣಮೂರ್ತಿ, ಜಾಜೂರು ನರಸಿಂಹಪ್ಪ, ಎಸ್‌ದುರ್ಗ ಹನುಮಂತರೆಡ್ಡಿ, ತ್ಯಾಗರಾಜು ಆಗ್ರಹಿಸಿದ್ದಾರೆ.

ಚಳ್ಳಕೆರೆ ವ್ಯಾಪ್ತಿಯಲ್ಲಿ ಶೇಂಗಾ ಪ್ರಮುಖ ಬೆಳೆಯಾಗಿದ್ದು, ಕೆಲ ವರ್ಷಗಳಿಂದ ಸತತವಾಗಿ ರೈತರಿಗೆ ನಷ್ಟವಾಗಿದೆ. ಈ ಬಾರಿ ಶೇ.100 ರಷ್ಟು ಶೇಂಗಾ ನೆಲಕಚ್ಚಿದೆ. ಬೆಳೆ ವಿಮೆ, ನಷ್ಟ ಪರಿಹಾರ, ಜಾನುವಾರುಗಳಿಗೆ ಮೇವು, ನೀರು ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು.ಟಿ.ರಘುಮೂರ್ತಿ, ಶಾಸಕಪರಶುರಾಮಪುರ ಹೋಬಳಿಯ 52 ಹಳ್ಳಿಗಳಲ್ಲಿ ಈಗಾಗಲೇ ತೇವಾಂಶದ ಕೊರತೆಯಿಂದ ಶೇಂಗಾ, ತೊಗರಿ ಒಣಗುತ್ತಿದೆ. ಕೆಲ ರೈತರು ದನಕರುಗಳಿಗೆ ಮೇವಾಗಲಿ ಎಂದು ಒಣಗಿದ ಶೇಂಗಾ ಗಿಡಗಳನ್ನೇ ಕಿತ್ತು ಸಂಗ್ರಹಿಸುತ್ತಿದ್ದಾರೆ. ಶಾಸಕರ ಸೂಚನೆಯಂತೆ ಖುಷ್ಕಿ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.ಜೀವನ್, ಕೃಷಿ ಅಧಿಕಾರಿ, ಚಳ್ಳಕೆರೆ ಮಳೆಯಾಶ್ರಿತ 10 ಎಕರೆ ಜಮೀನಿನಲ್ಲಿ ಮೂರುವರೆ ಕ್ವಿಂಟಾಲ್ ಶೇಂಗಾ ಬಿತ್ತನೆ ಮಾಡಲಾಗಿತ್ತು. ಇದಕ್ಕಾಗಿ 1 ಲಕ್ಷ ರೂ. ವ್ಯಯಿಸಲಾಗಿತ್ತು. ಸಕಾಲಕ್ಕೆ ಬೀಳದ ಮಳೆಯಿಂದಾಗಿ ಬೆಳೆ ಒಣಗುತ್ತಿದೆ. ಜಾನುವಾರುಗಳಿಗಾದರೂ ಮೇವು ದೊರೆಯಲಿ ಎಂದು ಒಣಗಿದ ಬೆಳೆಯನ್ನು ಕಟಾವು ಮಾಡಲಾಗುತ್ತಿದೆ.ಕೋನಿಗರಹಳ್ಳಿ ಜಯಣ್ಣ, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net