ಕ್ಷೇತ್ರದ ಅಭಿವೃದ್ಧಿಗೆ ಶಾಸಕರೇ ಅಡ್ಡಿ

Published on

ಕೆ.ಆರ್.ಪೇಟೆ : ಸಣ್ಣ ನೀರಾವರಿ ಇಲಾಖೆ ಉಪ ಕಚೇರಿಯನ್ನು ಬೂಕನಕೆರೆಯಿಂದ ನಾಗಮಂಗಲಕ್ಕೆ ಸ್ಥಳಾಂತರ ಆದೇಶದ ಬೆನ್ನಲ್ಲೆ ಶಾಸಕ ಎಚ್.ಟಿ.ಮಂಜು, ಜಿಲ್ಲಾ ಉಸ್ತುವಾರಿ ಸಚಿವ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಸಿ ಕ್ಷೇತ್ರಾಭಿವೃದ್ಧಿಗೆ ಶಾಸಕರೇ ಅಡ್ಡಿಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಆರೋಪಿಸಿದರು.
ಹಿಂದೆ ಪಾಂಡವಪುರ ಕ್ಷೇತ್ರದಿಂದ ಬೂಕನಕೆರೆಗೆ ಸ್ಥಳಾಂತರಗೊಂಡಿತ್ತು. 8 ಕೆರೆಗಳು ಇಲಾಖೆಗೆ ಸೇರಿವೆ. ನಾಗಮಂಗಲದಲ್ಲಿ 20 ಕೆರೆಗಳಿವೆ. ಅಭಿವೃದ್ಧಿ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಸ್ಥಳಾಂತರ ಮಾಡಲಾಗಿದೆ. ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಅನುಷ್ಠಾನವಾಗುತ್ತಿರುವ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೂ ತಡೆಯಾಗಿಲ್ಲ. ಈ ಸಂಬಂಧ ಶಾಸಕ, ಸಚಿವರ ವಿರುದ್ಧ ಏಕವಚನ ಪದ ಬಳಕೆ ಮಾಡಿರುವುದು ಸರಿಯಲ್ಲ. ಸಚಿವರ ಕ್ಷೇತ್ರದ ಅಭಿವೃದ್ಧಿಗೆ ಹಸ್ತಕ್ಷೇಪ ಏನು ಎಂಬುದರ ಬಗ್ಗೆ ದಾಖಲೆ ನೀಡಲಿ. ತಮ್ಮ ಸ್ಥಾನದ ಗೌರವಕ್ಕೆ ಚ್ಯುತಿ ಬರುವಂತೆ ಸಚಿವರು ನಡೆದುಕೊಂಡಿರುವ ಬಗ್ಗೆ ಶಾಸಕರು ದಾಖಲೆ ಬಿಡುಗಡೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಶಾಸಕರಿಂದಲೇ ಅಭಿವೃದ್ಧಿ ಕಾರ್ಯಗಳಿಗೆ ತಡೆ: ಸಚಿವ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರು ಯಾವುದೇ ರೀತಿಯ ಪಕ್ಷ ರಾಜಕಾರಣ ಮಾಡುತ್ತಿಲ್ಲ. ಸಚಿವರ ವಿಶ್ವಾಸ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಲಿ. ಕ್ಷೇತ್ರದ ಶಾಸಕರಾಗಿ ಒಂದು ವರ್ಷ ಕಳೆದಿದೆ. ಅಕ್ರಮ-ಸಕ್ರಮ ಸಮಿತಿಯ ಒಂದು ಸಭೆ ಕರೆದಿಲ್ಲ. ರೈತರಿಗೆ ದರಖಾಸ್ತು ಅರ್ಜಿ ಮಂಜೂರು ಮಾಡಿಲ್ಲ. ಪಟ್ಟಣದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಕಾಂಪೌಂಡ್ ನಿರ್ಮಾಣಕ್ಕೆ ಎರಡು ಕೋಟಿ ರೂ. ಕಾಮಗಾರಿಯನ್ನು ನಿಲ್ಲಿಸಿದ್ದೀರಿ. ತಾಲೂಕಿನ ಅಘಲಯ, ನಾರಾಯಣಪುರ, ರಾಯಸಮುದ್ರ ಸೇರಿ ಒಟ್ಟು ನಾಲ್ಕು ಕೆರೆಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿತ್ತು. ರಾಯಸಮುದ್ರ ಕೆರೆ ಕಾಮಗಾರಿಗೆ ನಿಮ್ಮ ಸಹೋದರ ಎಚ್.ಟಿ.ಲೋಕೇಶ್‌ಗೆ ಟೆಂಡರ್ ನೀಡಿಲ್ಲ ಎಂಬ ಕಾರಣಕ್ಕೆ ಪತ್ರ ಬರೆದು ಟೆಂಡರ್ ರದ್ದು ಪಡಿಸಿದ್ದಿರಿ. ಸ್ವಜನ ಪಕ್ಷಪಾತಕ್ಕಾಗಿ ಶಾಸಕ ಅಭಿವೃದ್ಧಿ ತಡೆದಿದ್ದಾರೆ ಎಂದು ಆರೋಪಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಮುಖಂಡ ರಾಜಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net