

ವಿಜಯವಾಣಿಸುದ್ದಿಜಾಲ ಸಕಲೇಶಪುರ
ಪಟ್ಟಣದ ವರ್ತುಲ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದ ಹತ್ತಾರು ಎಕರೆ ಕಾಫಿ ತೋಟ ಹಾಗೂ ನಿವೇಶನಗಳಿಗೆ ಸಮಸ್ಯೆ ಸೃಷ್ಟಿ ಯಾಗಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದ ಮಲ್ಲಿಕಾರ್ಜುನನಗರ ಬಡಾವಣೆ ಸಮೀಪ ನಡೆಯುತ್ತಿರುವ ವರ್ತುಲ ರಸ್ತೆ ಕಾಮಗಾರಿಯನ್ನು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಡಾವಣೆ ದಿಣ್ಣೆಯನ್ನು ಸುಮಾರು 50 ಅಡಿಗೂ ಹೆಚ್ಚು ಕಡಿದಾಗಿ ತುಂಡರಿಸಿರುವುದರಿಂದ ಕೌಡಳ್ಳಿ ಗ್ರಾಮಕ್ಕೆ ಸೇರಿದ ಹತ್ತಾರು ಎಕರೆ ಕಾಫಿ ತೋಟ ಹಾಗೂ ಮಲ್ಲಿಕಾರ್ಜುನನಗರ ಬಡಾವಣೆಯ ಹಲವು ನಿವೇಶನಗಳು ವರ್ತುಲ ರಸ್ತೆ ಕಾಮಗಾರಿಯಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಕಾಮಗಾರಿಯ ವೇಳೆ ಅವೈಜ್ಞಾನಿಕವಾಗಿ ಮಣ್ಣು ತೆಗೆದಿರುವುದರಿಂದ ಮಲ್ಲಿಕಾರ್ಜುನನಗರ ಬಡಾವಣೆಯಲ್ಲಿ ಈಗಾಗಲೇ ನಿರ್ಮಾಣವಾಗಿರುವ ಹಲವು ಕಟ್ಟಡಗಳಲ್ಲಿ ಬಿರುಕು ಮೂಡಿದೆ. ಹಲವು ನಿವೇಶನಗಳು ಕುಸಿದು ಬೀಳುವ ಹಂತ ತಲುಪಿದೆ. ಅಲ್ಲದೆ, ರಸ್ತೆಯ ಮಣ್ಣು ಸಮೀಪದ ತೋಟ ಹಾಗೂ ಕೆರೆಗಳಿಗೆ ನುಗ್ಗಿರುವುದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಹೆದ್ದಾರಿ ನಿರ್ಮಾಣದ ವೇಳೆ ಹೆದ್ದಾರಿಗೆ ಅಗತ್ಯವಿರುವ ಭೂಮಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಆದರೆ, ಇದಕ್ಕೆ ಹೊಂದಿಕೊಂಡಿರುವ ಭೂಮಿ ಕಾಮಗಾರಿಯಿಂದ ಹಾನಿಯಾದರೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು. ಈ ಸಂಬಂಧ ಅಧಿಕಾರಿಗಳು ಹೆಚ್ಚಿನ ಜಾಗ್ರತೆ ವಹಿಸುವ ಮೂಲಕ ಶೀಘ್ರವೇ ಕಾಮಗಾರಿ ಮುಗಿಸಬೇಕು ಎಂದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾನ್‌ವೀಜ್ ಮಾತನಾಡಿ, ಗುತ್ತಿಗೆದಾರರ ಸಮಸ್ಯೆಯಿಂದಾಗಿ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸಲು ಸಾಧ್ಯ ವಾಗಿಲ್ಲ. 2019 ರ ಅಂತ್ಯದಲ್ಲಿ ಮರು ಟೆಂಡರ್ ನೀಡಲಾಗಿದ್ದು 2022ರ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಮುಗಿಸಲು ಎಲ್ಲ ಯತ್ನ ನಡೆಸಲಾಗುತ್ತಿದೆ ಎಂದರು. ಮುಖಂಡರಾದ ಉಮೇಶ್, ಭಾಸ್ಕರ್, ತೋಟದಗದ್ದೆ ವಿನಯ್ ಮುಂತಾದವರಿದ್ದರು.