

ಸದೇಶ್ ಕಾರ್ಮಾಡ್ ಮೈಸೂರು
ರಾಜ್ಯದ 6 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ತಯಾರಿ ಪ್ರಾರಂಭಿಸಿದ್ದು, ರಾಜಕೀಯ ಚಟುವಟಿಕೆಗೆ ಗರಿಗೆದರಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರವು ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯನ್ನು ಒಳಗೊಂಡಿದ್ದು, ಒಟ್ಟು 18,379 ಮತದಾರರು ಇದ್ದಾರೆ. ಪುರುಷರು 10,355, ಮಹಿಳೆಯರು 8,022 ಹಾಗೂ ಇತರೆ 2 ಮತದಾರರು ಇದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಒಟ್ಟು 20,700 ಮತದಾರರು ಇದ್ದರು.
ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ನ ಮರಿತಿಬ್ಬೇಗೌಡ ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಮರಿತಿಬ್ಬೇಗೌಡರ ಪ್ರಭಾವ ಹೆಚ್ಚಾಗಿದ್ದು, ಸತತ ನಾಲ್ಕು ಬಾರಿ ಗೆಲುವಿನ ನಗೆಯನ್ನು ಬೀರಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಇವರು ಗೆಲುವು ಸಾಧಿಸುತ್ತಾ ಬಂದಿದ್ದಾರೆ.
ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮರಿತಿಬ್ಬೇಗೌಡ ಜೆಡಿಎಸ್ ವರಿಷ್ಠರೊಂದಿಗೆ ಮುನಿಸಿಕೊಂಡಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಕಳೆದ ವರ್ಷ ನಡೆದ ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರ ಗೆಲುವಿಗೆ ಮರಿತಿಬ್ಬೇಗೌಡ ಶ್ರಮಿಸಿದ್ದರು. ಆ ಸಂದರ್ಭದಲ್ಲಿಯೇ ಕಾಂಗ್ರೆಸ್ ಹೈಕಮಾಂಡ್ ಮರಿತಿಬ್ಬೇಗೌಡರಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ಖಾತ್ರಿ ಮಾಡಿದ್ದರು.
ಕಾಂಗ್ರೆಸ್‌ನಿಂದ ಮರಿತಿಬ್ಬೇಗೌಡ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಖ ಖಚಿತವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಈ ಬಾರಿ ಆಕಾಂಕ್ಷಿಗಳು ಕಾಣಿಸಿಕೊಂಡಿಲ್ಲ. ಜೆಡಿಎಸ್‌ನಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಸ್ಪರ್ಧಿಸುವ ಸಾಧ್ಯತೆ ಇದ್ದು, ಜೆಡಿಎಸ್ ಹೈಕಮಾಂಡ್ ಸಹ ಶ್ರೀಕಂಠೇಗೌಡರ ಸ್ಪರ್ಧೆಗೆ ಒಲವು ತೋರಿದ್ದಾರೆ. ಈ ಬಾರಿ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಜೆಡಿಎಸ್ ಮುಖಂಡ ವಿವೇಕ್ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದು, ಅಂತಿಮವಾಗಿ ವರಿಷ್ಠರು ಯಾರಿಗೆ ಆಶೀರ್ವಾದ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಬಿಜೆಪಿಯಲ್ಲಿ ಟಿಕೆಟ್ ಪೈಪೋಟಿ: ಬಿಜೆಪಿಯಲ್ಲಿ ಈ ಬಾರಿ ಟಿಕೆಟ್‌ಗೆ ಪೈಪೋಟಿ ಕಂಡು ಬಂದಿದೆ. ಮೈಸೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಇ.ಸಿ. ನಿಂಗರಾಜ್‌ಗೌಡ, ಜನಪದ ವಿಶ್ವವಿದ್ಯಾಲಯ ಸಿಂಡಿಕೇಟ್ ಮಾಜಿ ಸದಸ್ಯ ಡಾ. ವಸಂತ್ ಕುಮಾರ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ದ್ದಾರೆ. ಕಳೆದ ಬಾರಿ ಇದೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ ಬಿ. ನಿರಂಜನಮೂರ್ತಿ ಈ ಬಾರಿಯೂ ಸ್ಪರ್ಧೆಗೆ ಅವಕಾಶ ಕೋರಿದ್ದಾರೆ. ಈ ಮೂವರಲ್ಲಿ ಯಾರಿಗೆ ಹೈಕಮಾಂಡ್ ಆಶೀರ್ವಾದ ದೊರೆಯಲಿದೆ ಎಂಬ ಕುತೂಹಲ ಮೂಡಿದೆ.
ಮೈತ್ರಿ ಮಾತುಕತೆ: ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ರಾಜಕೀಯ ಮೈತ್ರಿ ಮಾತುಕತೆ ನಡೆದು ಜೆಡಿಎಸ್ ಎನ್‌ಡಿಎ ಮೈತ್ರಿಕೂಟವನ್ನು ಅಧಿಕೃತವಾಗಿ ಸೇರಿಕೊಂಡಿದೆ. ಹೀಗಾಗಿ ವಿಧಾನ ಪರಿಷತ್ ಚುನಾವಣೆಯನ್ನು ಸಹ ಬಿಜೆಪಿ- ಜೆಡಿಎಸ್ ಒಟ್ಟಾಗಿ ಎದುರಿಸುವ ಕುರಿತು ಚರ್ಚೆಗಳು ನಡೆಯುತ್ತಿದೆ. ಒಟ್ಟು 6 ವಿಧಾನ ಪರಿಷತ್ ಸ್ಥಾನಗಳಲ್ಲಿ 2 ಸ್ಥಾನಗಳನ್ನು ನಮಗೆ ಬಿಟ್ಟುಕೊಡಬೇಕು ಎಂಬುದು ಜೆಡಿಎಸ್‌ನ ಬೇಡಿಕೆಯಾಗಿದ್ದು, ಸೀಟು ಹಂಚಿಕೆಯ ಕುರಿತು ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮಾತುಕತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಇನ್ನೂ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮುಂದಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮರಿತಿಬ್ಬೇಗೌಡ, ದಕ್ಷಿಣ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬೋಜೇಗೌಡ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಈ ಎರಡೂ ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡಬೇಕು ಎಂಬುದು ಜೆಡಿಎಸ್ ಬೇಡಿಕೆಯಾಗಿತ್ತು. ಬಿಜೆಪಿಯೊ ಂದಿಗೆ ಮಾತುಕತೆ ಸಂದರ್ಭ ಬೋಜೇಗೌಡರು ಪ್ರತಿನಿಧಿಸುತ್ತಿರುವ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲು ಜೆಡಿಎಸ್ ಚಿಂತನೆ ನಡೆಸಿದೆ ಎನ್ನಲಾಗಿದೆ. ದಕ್ಷಿಣ ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟು ಬೆಂಗಳೂರು ಪದವಿಧರರ ಕ್ಷೇತ್ರವನ್ನು ಪಡೆಯಲು ಜೆಡಿಎಸ್ ಚಿಂತನೆ ನಡೆಸುತ್ತಿದೆ. ಈಗಾಗಲೇ ಬೆಂಗಳೂರು ಪದವಿಧರರ ಕ್ಷೇತ್ರಕ್ಕೆ ರಂಗನಾಥ್ ಅವರನ್ನು ಅಭ್ಯರ್ಥಿ ಎಂದು ಜೆಡಿಎಸ್ ಘೋಷಿಸಿದ್ದು, ಹೀಗಾಗಿ ಅವರನ್ನು ಬದಲಿಸಲು ಜೆಡಿಎಸ್ ವರಿಷ್ಠರು ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ಜೆಡಿಎಸ್ ಪಟ್ಟು ಹಿಡಿದಿದೆ. ಪರಿಷತ್ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆಯಲಿದೆಯೇ? ಒಂದುವೇಳೆ ಮುಂದುವರೆದರೆ ದಕ್ಷಿಣ ಶಿಕ್ಷಕರ ಕ್ಷೇತ್ರ ಈ ಬಾರಿ ಜೆಡಿಎಸ್ ಅಥವಾ ಬಿಜೆಪಿ ಪೈಕಿ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.