

ಮೈಸೂರು: ಹಳೇ ಪಾತ್ರೆಗೆ ಹೊಸ ನೀರು ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಜಜೆಟ್‌ನಲ್ಲಿ ಯಾವುದೇ ಹೊಸತು ಹಾಗೂ ವಿಶೇಷತೆಗಳಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ವ್ಯಾಖ್ಯಾನಿಸಿದ್ದಾರೆ.
ಬಜೆಟ್‌ನಲ್ಲಿ ಬಡವರು ಹಾಗೂ ರೈತರ ಹಿತ ಕಾಯುವ ಕೆಲಸವಾಗಿಲ್ಲ. ಗ್ಯಾರಂಟಿಗಳ ಭರಾಟೆಯಲ್ಲಿ ರಾಜ್ಯವನ್ನು ಆರ್ಥಿಕವಾಗಿ ಮತ್ತಷ್ಟು ದಿವಾಳಿಯತ್ತ ಕೊಂಡೊಯ್ಯಲಾಗಿದೆ. ಗ್ಯಾರಂಟಿಗಳನ್ನು ಈಡೇರಿಸುವುದಕ್ಕಾಗಿ ಹೆಚ್ಚಿನ ಹಣ ಮೀಸಲಿಟ್ಟಿರುವುದು, ಇದು ಇತರ ಅಭಿವೃದ್ಧಿ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಲಿದೆ. ಚಿಕ್ಕ ಹಾಗೂ ಬೃಹತ್ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ ಸೆಳೆಯುವ ನಿಟ್ಟಿನಲ್ಲಿ ಬಜೆಟ್ ಮೂಲಕ ಜನರ ದಿಕ್ಕು ತಪ್ಪಿಸುವ ಯತ್ನ ಮಾಡಲಾಗಿದೆ. ಇದೊಂದು ಅಭಿವೃದ್ಧಿ ಪರವಾದ ಬಜೆಟ್ ಅಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಡಾನೆ ಉಪಟಳ ನಿಯಂತ್ರಣಕ್ಕೆ ಕ್ರಮವಿಲ್ಲ:
ರಾಜ್ಯದಲ್ಲಿ ವನ್ಯಜೀವಿ- ಮಾನಸ ಸಂಘರ್ಷ ಮಿತಿ ಮೀರಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಿಎಂ ತಮ್ಮ ಬಜೆಟ್‌ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ. ಇದಲ್ಲದೆ ಬಂಡೀಪುರಕ್ಕೆ ಕಾರ್ಯಪಡೆ ರಚನೆ ಬಿಟ್ಟರೆ, ಕಾಡಾನೆಗಳ ಉಪಟಳ ನಿಯಂತ್ರಿಸುವ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಯೋಜನೆಗೆ ನಯಾಪೈಸೆ ಸಿಕ್ಕಿಲ್ಲ. ಪ್ರಸಕ್ತ ಸಾಲಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಪ್ರಾಮುಖ್ಯತೆ ನೀಡಲಾಗುವುದು ಎಂದಷ್ಟೇ ಉಲ್ಲೇಖಿಸಲಾಗಿದೆ ಎಂದು ಮಂಜೇಗೌಡ ಕಿಡಿಕಾರಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಜನ ವನ್ಯಜೀವಿಗಳ ಉಪಟಳಕ್ಕೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಕಾಡಾನೆ ಉಪಟಳವಂತೂ ಮಿತಿ ಮೀರಿದೆ. ಇದಕ್ಕಾಗಿ ಬಜೆಟ್‌ನಲ್ಲಿ ವಿಶೇಷ ಅನುದಾನ ಪ್ರಕಟಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.