

ಜಗಳೂರು: ‘ನನಗೂ ಫ್ರೀ ನಿನಗೂ ಫ್ರೀ’ ಎಂದು ಹೇಳಿದವರೇ ಇಂದು ಕುರ್ಚಿಗಾಗಿ ಟವೆಲ್ ಹಾಕಲು ದಿಲ್ಲಿ ವರಿಷ್ಠರ ಕಡೆ ಓಡಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ಕುಮಾರ್ ರಾಜ್ಯ ಸರ್ಕಾರವನ್ನು ಟೀಕಿಸಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಬೂತ್ ಮಟ್ಟದ ಏಜೆಂಟರ (ಬಿಎಲ್ಎ-2) ಮತಪಟ್ಟಿ ಪರಿಷ್ಕರಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಹಣವಿಲ್ಲದೆ ಸುಳ್ಳು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರಿಗೆ ತೃಪ್ತಿಕರವಾದ ಆಡಳಿತ ಕಾಂಗ್ರೆಸ್ ನೀಡಿಲ್ಲ. ಕೇವಲ ಗ್ಯಾರಂಟಿಗಳು ಬಿಟ್ಟರೆ ಯಾವುದೇ ಪ್ರಗತಿ ಕಾಣುತ್ತಿಲ್ಲ. ಇಂತಹ ಸರ್ಕಾರಕ್ಕೆ ಜನತೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ. ಹಾಗಾಗಿ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರತಿ ಮನೆಗಳಿಗೂ ಹೋಗಿ ರಾಜ್ಯ ಸರ್ಕಾರದ ವೈಫಲ್ಯವನ್ನು ತಿಳಿಸಬೇಕು ಎಂದರು.
ಸಚಿವರಾದ ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ ಅವರಿಗೆ ತಮ್ಮ ಸರ್ಕಾರದ ತಪ್ಪುಗಳು ಕಾಣುತ್ತಿಲ್ಲ. ಆದರೆ ಬೇರೆ ವಿಷಯಗಳನ್ನು ಮುನ್ನೆಲೆಗೆ ತಂದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಸಹ ಪರಿಷತ್ ಸದಸ್ಯ. ನಮಗೆ ಅನುದಾನ ನೀಡಲು ಸರ್ಕಾರದಲ್ಲಿ ಹಣವಿಲ್ಲ. ಮಾತೆತ್ತಿದರೆ ಆರ್ಎಸ್ಎಸ್ ವಿರುದ್ಧ ಮಾತನಾಡುತ್ತಾರೆ ಎಂದು ಹೇಳಿದರು.
ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಜಗಳೂರು ಬಿಜೆಪಿ ಬೆಂಬಲಿತ ಕ್ಷೇತ್ರ, ಕಳೆದ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದೇನೆ. ಆದರೂ ಪಕ್ಷದ ಸಂಘಟನೆಯಲ್ಲಿ ಹಿಂದೆ ಬಿದ್ದಿಲ್ಲ. ಎಲ್ಲ ಜನರ ನಡುವೆ ಇದ್ದೇನೆ ಎಂದರು.
ಈಗಾಗಲೇ ಕಾಂಗ್ರೆಸ್ ಸರ್ಕಾರದ ಆಡಳಿತ ಜನರಿಗೆ ಅರ್ಥವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಖಚಿತ. ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು ಎಂದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ಪಕ್ಷದಲ್ಲಿ ಒಗ್ಗಟ್ಟು ಬಹಳ ಮುಖ್ಯ. ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ಪಕ್ಷ ಬಲವರ್ಧನೆಯಾಗುತ್ತದೆ. ಚುನಾವಣೆಯಲ್ಲಿ ಸೋಲಲು ಸಾಧ್ಯವಿಲ್ಲ. ಬೂತ್ ಮಟ್ಟದಿಂದಲೂ ಸಂಘಟಿತರಾಗಬೇಕು. ಸರ್ಕಾರದ ಲೋಪಗಳನ್ನು ಜನರ ಮುಂದಿಡಬೇಕು. ಹೊಸ ಮತಗಟ್ಟೆಗಳಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿ ಎಚ್ಚರದಿಂದ ಕಾರ್ಯನಿರ್ವಹಿಸೋಣ ಎಂದು ಪೋ›ತ್ಸಾಹಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಡ್ಲೆಬಾಳು ಧನಂಜಯ, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು, ಡಿ.ವಿ. ನಾಗಪ್ಪ, ಬಿಜೆಪಿ ಮಂಡಲ ನೂತನ ಅಧ್ಯಕ್ಷ ಎ.ಎಂ. ಆರಾಧ್ಯ ಮಾತನಾಡಿದರು.
ಅನಿಲ್ ಕುಮಾರ್ ನಾಯ್್ಕ ವಸಂತಕುಮಾರ್, ಪಲ್ಲಾಗಟ್ಟೆ ಮಹೇಶ್, ದೇವಿಕೆರೆ ಶಿವಕುಮಾರಸ್ವಾಮಿ, ಕಟ್ಟಿಗೆಹಳ್ಳಿ ಮಂಜುನಾಥ್ ಇತರರು ಇದ್ದರು.