

ಕಳಸ: ಒಂದು ಸ್ಥಳದ ಇತಿಹಾಸ, ಸಾಂಸ್ಕೃತಿಕ ವಿಚಾರಗಳನ್ನು ಅಳಿಯದಂತೆ ಬೆಳೆಸುವ ಮತ್ತು ಐತಿಹಾಸಿಕ ದಾಖಲೆಗಳನ್ನು ಉಳಿಸುವ ಪ್ರಯತ್ನ ನಮ್ಮದಾಗಬೇಕು ಎಂದು ಇತಿಹಾಸ ಸಂಶೋಧಕಿ ಡಾ. ಕೆ.ಎನ್.ಸುಪ್ರಿತಾ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಕಳಸ ಹೋಬಳಿ ಘಟಕದಿಂದ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಕಳಸ ತಾಲೂಕು ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆ ಕುರಿತು ದತ್ತಿ ಉಪನ್ಯಾಸ ನೀಡಿದ ಅವರು, ಕಳಸ ತಾಲೂಕು ಐತಿಹಾಸಿಕ ಹಿನ್ನೆಲೆ ಹೊಂದಿರುವ ಪ್ರದೇಶ. ಭೌಗೋಳಿಕವಾಗಿ ಭದ್ರಾ ನದಿಯು ದಕ್ಷಿಣ, ಪಶ್ಚಿಮ ಮತ್ತು ಉತ್ತರ ದಿಕ್ಕಿಗೆ ಹರಿಯುತ್ತದೆ. ಇದನ್ನು ಎತ್ತರದ ಸ್ಥಳದಿಂದ ವೀಕ್ಷಿಸಿದಾಗ ಒಂದು ಕುಂಭ ಅಥವಾ ಕಳಸದಂತೆ ಗೋಚರಿಸುವುದಕ್ಕಾಗಿ ಕಳಸ ಎಂದು ಕರೆಯುತ್ತಾರೆ ಎಂದರು.
ಕಳಸದಲ್ಲಿ ಪ್ರತಿ ವರ್ಷ ನಡೆಯುವ ಗಿರಿಜಾಕಲ್ಯಾಣ ಪುರಾಣ ಪ್ರಸಿದ್ಧಿಯಾಗಿದೆ. ಕಾಶಿ ವಿಶ್ವೇಶ್ವರನ ದರ್ಶನಕ್ಕಿಂತ ಕಳಸದ ಕಲಶೇಶ್ವರನ ದರ್ಶನ ಮಾಡುವುದರಿಂದ ಒಂದು ಗುಲಗಂಜಿಯಷ್ಟು ಹೆಚ್ಚಿನ ಪುಣ್ಯ ದೊರೆಯುತ್ತದೆ ಎಂಬುದನ್ನು ಕಲಶೇಶ್ವರ ದೇವಾಲಯದಲ್ಲಿರುವ ದ್ವಾರಪಾಲಕನ ಕೈಯಲ್ಲಿ ತೋರಿಸಿರುವುದು ಶಿಲ್ಪಿಯ ಕೈಚಳಕ ತೋರಿಸುತ್ತದೆ. ಕಳಸದ ಕುರಿತು ಕೆಳದಿ ನೃಪವಿಜಯ, ಶಿವತತ್ವರತ್ನಾಕರ ಕೃತಿಗಳಲ್ಲಿ ಉಲ್ಲೇಖವಿರುವುದನ್ನು ಕಾಣಬಹುದು.
7ಕಳಸ1
ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಅಶೋಕ್ ಕುಂದೂರು ಉದ್ಘಾಟಿಸಿದರು. ನರೇಂದ್ರ ಕಲ್ಲಾನೆ, ಅ.ರಾ.ರಾಧಾಕೃಷ್ಣ, ಮಗ್ಗಲಮಕ್ಕಿ ಗಣೇಶ್ ಇತರರಿದ್ದರು.