ಕಾನೂನಾತ್ಮಕವಾಗಿ ಸರ್ಕಾರಿ ಭವನ ವಶಕ್ಕೆ

ilk rural 28-2
ಇಳಕಲ್ಲದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಕಾಳಮ್ಮ ಜಕ್ಕಾ, ಅಮೃತ ಬಿಜ್ಜಳ, ಸುರೇಶ ಜಂಗ್ಲಿ, ಮೌಲಪ್ಪ ಬಂಡಿವಡ್ಡರ, ರೇಶ್ಮಾ ಮಾರನಬಸರಿ ಇದ್ದಾರೆ.
Published on

ಇಳಕಲ್ಲ(ಗ್ರಾ): ನಗರದ ಎಲ್ಲೆಡೆ ಇರುವ ಸರ್ಕಾರಿ ಭವನ ಮತ್ತು ಸಮುದಾಯ ಭವನಗಳನ್ನು ಕಾನೂನಾತ್ಮಕವಾಗಿ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಹೇಳಿದರು.

ನಗರಸಭೆ ಕಾರ್ಯಾಲಯದ ಅಧ್ಯಕ್ಷರ ಕೊಠಡಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಯಾರ ಮೇಲೆಯೂ ದಬ್ಬಾಳಿಕೆ ನಡೆಸುವುದಿಲ್ಲ. ಕಾನೂನಿನ ಪ್ರಕಾರ ಆಗಬೇಕಾದ ಕೆಲಸಗಳನ್ನು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶದಂತೆ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ರೇಶ್ಮಾ ಮಾರನಬಸರಿ, ಅಮೃತ ಬಿಜ್ಜಳ, ಸುರೇಶ ಜಂಗ್ಲಿ, ಮೌಲಪ್ಪ ಬಂಡಿವಡ್ಡರ ಮಾತನಾಡಿ, ದಬ್ಬಾಳಿಕೆ ದೌರ್ಜನ್ಯಗಳನ್ನು ನಾವು ಮಾಡುತ್ತಿಲ್ಲ. ಈ ಹಿಂದಿನ ಬಿಜೆಪಿಯ ಮಾಜಿ ಶಾಸಕರು, ನಗರಸಭೆ ಮಾಜಿ ಅಧ್ಯಕ್ಷರು ಮಾಡಿದ್ದಾರೆ. ನಗರಸಭೆಯ ಎಂಟು ಕಾಂಗ್ರೆಸ್ ಸದಸ್ಯರು ಸೇರಿ ನಮ್ಮ ವಾರ್ಡ್‌ಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳ ಕುರಿತು ಕೇಳಲು ಹೋದಾಗ ನಮ್ಮ ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಐವರು ಮಹಿಳಾ ಸದಸ್ಯೆಯರನ್ನು ಹಿಡಿದು ನ್ಯಾಯಾಲಯಕ್ಕೆ ಅಡ್ಡಾಡುವಂತೆ ಮಾಡಿದರು. ಅಂಬೇಡ್ಕರ್ ಕಾಲನಿಯಲ್ಲಿರುವ 90 ಕುಟುಂಬಗಳನ್ನು ಎತ್ತಂಗಡಿ ಮಾಡಲು ಪ್ರಯತ್ನಿಸಿದರು.

ಏ. 14 ರಂದು ಅಂಬೇಡ್ಕರ್ ಜಯಂತಿ ಮಾಡದಂತೆ ನೋಡಿಕೊಂಡರು. ಸುಖಾಸುಮ್ಮನೆ ನಮಗೆಲ್ಲ ಸಾಕಷ್ಟು ತೊಂದರೆ ಕೊಟ್ಟಿದ್ದರಿಂದಾಗಿ ಅಧಿಕಾರ ಕಳೆದುಕೊಂಡರು ಎಂದು ತಿಳಿಸಿದರು.

ಅಂಬೇಡ್ಕರ್ ಭವನದ ಬಗ್ಗೆ ನಗರಸಭೆ ಮಾಡಿದ ಠರಾವನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಿದ್ದಾರೆ. ಕೋರ್ಟಿನಲ್ಲಿ ಇವರ ಅರ್ಜಿ ತಿರಸ್ಕಾರವಾದ ನಂತರ ಮತ್ತೊಂದು ಆದೇಶ ಮಾಡಿ ಊರಲ್ಲಿನ ಎಲ್ಲ ಸರ್ಕಾರಿ ಭವನಗಳನ್ನು ನಗರಸಭೆ ವಶಕ್ಕೆ ತೆಗೆದುಕೊಳ್ಳಲು ಹೇಳಿದ್ದಾರೆ. ಅದಕ್ಕಾಗಿ ತಾಲೂಕು ಆಡಳಿತ ಈ ಕಾರ್ಯಾಚರಣೆ ನಡೆಸಿದೆ ಎಂದು ವಿವರಿಸಿದರು.

ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ, ಸದಸ್ಯರಾದ ಆಫ್ರೀನ್ ಸೋನಾರ್, ಲಕ್ಷ್ಮೀಬಾಯಿ ಹಾದಿಮನಿ, ನಜ್ಮಾ ಬನ್ನಿಗೋಳ, ಶರಣಮ್ಮ ತಿಮ್ಮಾಪೂರ, ಶಾರದಾ ಪತ್ತಾರನಾಮನಿರ್ದೇಶನ ಸದಸ್ಯರಾದ ರಾಧೇಶ್ಯಾಮ ದರಕ, ಅಬ್ಬು ಹಳ್ಳಿ, ಯಲ್ಲಪ್ಪ ರಾಜಾಪೂರ, ಮಲ್ಲು ಮಡಿವಾಳರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net