

ದಾವಣಗೆರೆ: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಬುಧವಾರ ಕಾನೂನು ಸೇವಾ ಕೇಂದ್ರವನ್ನು ಪ್ರಾರಂಭಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು ಎನ್. ಬಡಿಗೇರ್ ಕೇಂದ್ರವನ್ನು ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಪೊಲೀಸರಿಂದ ಬಂಧನಕ್ಕೆ ಒಳಗಾದ ವ್ಯಕ್ತಿಗಳಿಗೆ ಈ ಕೇಂದ್ರದಲ್ಲಿ ಕಾನೂನು ನೆರವು ದೊರೆಯುತ್ತದೆ ಎಂದು ತಿಳಿಸಿದರು.
ಕಾನೂನು ಸೇವಾ ಪ್ರಾಧಿಕಾರದಿಂದ ಈ ಕೇಂದ್ರದಲ್ಲಿ ವಕೀಲರನ್ನು ನೇಮಿಸಲಾಗುವುದು. ಆಸಕ್ತರು ಅವರಿಂದ ಕಾನೂನು ಸಹಾಯ ಪಡೆಯಬಹುದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಇದೇ ಮೊದಲ ಬಾರಿಗೆ ಬಡಾವಣೆ ಠಾಣೆಯಲ್ಲಿ ಈ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಕ್ರಮೇಣ ಬೇರೆ ಪೊಲೀಸ್ ಠಾಣೆಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಬಂಧನಕ್ಕೆ ಒಳಗಾದವರು, ನೊಂದವರು ಬಯಸಿದರೆ ಕೇಂದ್ರದ ಸಹಾಯ ಪಡೆದುಕೊಳ್ಳಬಹುದು. ನುರಿತ ವಕೀಲರು ನೆರವು ನೀಡುತ್ತಾರೆ. ಇಲ್ಲಿ ಉಚಿತ ಕಾನೂನು ಸಲಹೆ ಮತ್ತು ಸೇವೆಯನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು. ನಗರ ಉಪ ವಿಭಾಗದ ಡಿವೈಎಸ್ಪಿ ನಾಗೇಶ್ ಐತಾಳ್, ಬಡಾವಣೆ ಠಾಣೆ ಪಿಎಸ್‌ಐ ವೀರಬಸಪ್ಪ ಕುಸಲಾಪುರ ಇದ್ದರು.
...
ಕೆಂಚಿಕೊಪ್ಪ ಘಟನೆ ತನಿಖೆ ಹಂತದಲ್ಲಿ
ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಮಾಯಮ್ಮ ಮರಿಯಮ್ಮ ದೇವಿಯ ಜೋಡಿ ಸಿಡಿ ಉತ್ಸವದಲ್ಲಿ ಮಹಿಳೆಯೊಬ್ಬರನ್ನು ಕಂಬಕ್ಕೆ ಕಟ್ಟಿ ಎತ್ತರದಲ್ಲಿ ತಿರುಗಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಹನುಮಂತರಾಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರ ವಿಚಾರಣೆ ಮಾಡಲಾಗಿದೆ. ದೇವಸ್ಥಾನ ಸಮಿತಿಯವರ ಹೇಳಿಕೆ ಪಡೆಯಲಾಗಿದೆ. ಚನ್ನಗಿರಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಪ್ರಗತಿಯಲ್ಲಿದೆ ಎಂದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಇತ್ತೀಚೆಗೆ ಹೊನ್ನಾಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಪ್ರಕರಣ ತನಿಖೆ ಹಂತದಲ್ಲಿದೆ ಎಂದು ಪ್ರತಿಕ್ರಿಯಿಸಿದರು.