ಮಹಿಳೆಯರಿಗೆ ಕಾನೂನು ಸಾಕ್ಷರತೆ ಅವಶ್ಯಕ

mysore
Published on

ಮೈಸೂರು: ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಮತ್ತು ಕಾನೂನು ಸಾಕ್ಷರತೆ ಅತಿ ಮುಖ್ಯ ಎಂದು ಎಜ್ಯುಕೇರ್ ಐಟಿಇಎಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ರಚನಾ ಮಹೇಶ್ ಹೇಳಿದರು.


ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಮಹಿಳೆ ಸ್ವಾವಲಂಬನೆ ಸಾಧಿಸಿದರೆ ಸಹಜವಾಗಿಯೇ ಆಕೆ ಸ್ವತಂತ್ರವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ ಎಂದರು.


ಸಮಾಜದಲ್ಲಿ ನಡೆಯುವ ಶೋಷಣೆ, ಅತ್ಯಾಚಾರ, ದೌರ್ಜನ್ಯ ಮತ್ತು ಕಿರುಕುಳಗಳನ್ನು ಹಿಮ್ಮೆಟ್ಟಿಸಲು ಮಹಿಳೆಯರಿಗೆ ಕಾನೂನಿನ ಸಾಕ್ಷರತೆ ಅಗತ್ಯವಾಗಿದೆ. ವನಿತೆಯರು ವ್ಯಕ್ತಿತ್ವ, ಆತ್ಮಗೌರವ ಹಾಗೂ ಆರೋಗ್ಯದ ಬಗ್ಗೆ ಎಂದಿಗೂ ಕಡೆಗಣಿಸಬಾರದು. ಅವುಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.


ಮಹಿಳಾ ದಿನಾಚರಣೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ, ಮಹಿಳಾ ಸಬಲೀಕರಣಕ್ಕೆ ಪೂರಕವಾದ ಕಾರ್ಯಕ್ರಮವನ್ನು ಆಗಾಗ ನಡೆಸಬೇಕು. ಮಹಿಳಾ ದಿನ ಸೇರಿದಂತೆ ಮಹಿಳಾ ವೇದಿಕೆ ಕಾರ್ಯಕ್ರಮಗಳು ಕೇವಲ ಮಹಿಳೆಯರಿಗೆ ಸೀಮಿತವಾಗದೆ, ಪುರುಷರೂ ಒಳಗೊಳ್ಳುವಂತೆ ಮಾಡಬೇಕು.

ವರ್ಷವಿಡೀ ವಿವಿಧ ಮಹಿಳಾ ಸಂಘಟನೆಗಳು, ಸಂಘ-ಸಂಸ್ಥೆಗಳು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಮತ್ತು ಸಬಲೀಕರಣಗೊಳಿಸಲು ವಿವಿಧ ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಿದರು.


ಲಿಂಗ ತಾರತಮ್ಯದಿಂದ ಮುಕ್ತವಾದ ಉತ್ತಮ ಸಮಾಜ ನಿರ್ಮಿಸಲು, ಲಿಂಗ ಸಮಾನತೆಯ ಸಂದೇಶವನ್ನು ನೀಡಲು ಪ್ರತಿ ವರ್ಷ ಮಾರ್ಚ್ 8ರಂದು ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇತಿಹಾಸ, ಸಮಕಾಲೀನ ಸಮಾಜದಲ್ಲಿನ ಘಟನೆಗಳಿಗೆ ಮಹಿಳೆಯರ ಕೊಡುಗೆಯನ್ನು ಎತ್ತಿ ತೋರಿಸುವ ದಿನ ಇದಾಗಿದೆ ಎಂದರು.


ಪ್ರಾಂಶುಪಾಲ ಡಾ.ಎಸ್.ಮರೀಗೌಡ, ಸಹ ಪ್ರಾಧ್ಯಾಪಕಿ ಪ್ರೊ.ಎನ್.ಗೀತಾ, ಡಾ.ಎಸ್.ಪೂರ್ಣಿಮಾ, ಅಧೀಕ್ಷಕಿ ಡಿ.ಸುನೀತಾ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net