ಭೂಮಿ ಮಂಜೂರಿಗೆ ಕಾನೂನು ತಿಳುವಳಿಕೆ ಅಗತ್ಯ

10 ylp 02 (jatha)
Published on

ಯಲ್ಲಾಪುರ: ಅರಣ್ಯವಾಸಿಗಳ ಅರಣ್ಯ ಭೂಮಿ ಮಂಜೂರಿಗೆ ಕಾನೂನು ತಿಳುವಳಿಕೆ ಅವಶ್ಯ. ಕಾನೂನು ಜ್ಞಾನ ವೃದ್ಧಿಸುವ ಕಾರ್ಯವನ್ನು ಅರಣ್ಯವಾಸಿಗಳ ಕಾನೂನು ಜಾಗೃತಾ ಜಾಥಾ ಮಾಡುತ್ತಿದೆ ಎಂದು ಅರಣ್ಯ ಅತಿಕ್ರಮಣದಾರರ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ತಾಲೂಕಿನ ಮಂಚಿಕೇರಿಯ ಮಹಾಗಣಪತಿ ದೇವಾಲಯದ ಸಭಾಂಗಣದಲ್ಲಿ ಅರಣ್ಯವಾಸಿಗಳ ಕಾನೂನು ಜಾಗೃತಾ ಜಾಥಾ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕಾನೂನು ಜಾರಿಗೆ ಬಂದು 18 ವರ್ಷಗಳಾದರೂ ಜಿಲ್ಲೆಯಲ್ಲಿ ಶೇ. 10ರಷ್ಟು ಅರಣ್ಯವಾಸಿಗಳ ಮಂಜೂರಿಗೆ ಅರ್ಜಿ ನೀಡಿಲ್ಲ, ಶೇ. 72ರಷ್ಟು ಅರಣ್ಯವಾಸಿಗಳ ಜಿಪಿಎಸ್ ಅಸಮರ್ಪಕವಾಗಿದೆ. ಜಿಲ್ಲೆಯಲ್ಲಿ 87,752 ಅರ್ಜಿ ಸಲ್ಲಿಸಿದ್ದಲ್ಲಿ ಪ್ರಥಮ ಹಂತದಲ್ಲಿ 69,733 ಅರ್ಜಿಗಳು ತಿರಸ್ಕಾರವಾಗಿದ್ದು, ಅಂದರೆ ಶೇ. 73ರಷ್ಟು ಅರ್ಜಿಗಳು ತಿರಸ್ಕಾರವಾಗಿವೆ. ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಕ್ಕು ದೊರಕಿರುವುದು 2852 ಅರ್ಜಿಗಳಿಗೆ ಮಾತ್ರ ಎಂದರು.

ಸಾಗುವಳಿ ಮಾಡುತ್ತಿದ್ದೇವೆ, ಅರ್ಜಿ ಕೊಟ್ಟಿದ್ದೇವೆ, ಜಿಪಿಎಸ್ ಆಗಿಲ್ಲ. ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದಿದೆ, ಅರಣ್ಯ ಸಿಬ್ಬಂದಿ ದೌರ್ಜನ್ಯ, ಕಿರುಕುಳ ತಪ್ಪಿಲ್ಲ. ಹಕ್ಕುಪತ್ರ ನೀಡಿದ್ದಾರೆ, ಪಹಣ ಪತ್ರದಲ್ಲಿ ಹೆಸರು ದಾಖಲಾಗಿಲ್ಲ, ಬುಡಕಟ್ಟು ಜನಾಂಗದ ಭೂಮಿ ಹಕ್ಕುದಾರರಿಗೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ ಹೀಗೆ ವಿವಿಧ ಸಮಸ್ಯೆಗಳ ಕುರಿತು ಅರಣ್ಯ ವಾಸಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು.

ತಾಲೂಕು ಅಧ್ಯಕ್ಷ ಭೀಮಶಿ ವಾಲ್ಮೀಕಿ ಅಧ್ಯಕ್ಷತೆ ವಹಿಸಿದ್ದರು. ಗ್ರೀನ್ ಕಾರ್ಡ್ ಪ್ರಮುಖರಾದ ವಿನೋದ ತಳಕೇರಿ, ಚಂದ್ರು ಪೂಜಾರಿ, ಬೀರಪ್ಪ ಬಿಳ್ಕಿ, ಕೃಷ್ಣ ನಾಯರ್, ನರಸಿಂಹ ನಾಯ್ಕ ಮಾತನಾಡಿದರು. ಮಹೇಶ ಮರಾಠಿ ನಿರ್ವಹಿಸಿದರು. ಭಾಸ್ಕರ ಗೌಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net